Thursday, November 27, 2008

ಜನಪದ ಕಥಾಕಣಜ ಈರಬಡಪ್ಪ

ಚಿತ್ರದುರ್ಗ ಜಿಲ್ಲೆ ಜಾನಪದಕ್ಕೆ ಖನಿಜಭೂಮಿ ಈ ನೆಲದಲ್ಲಿ ನಾಡೋಜ ಸಿರಿಯಜ್ಜಿ, ಬಿದರಕೆರೆ ತೋಪಮ್ಮ, ಗಿಡ್ಡಜ್ಜ ಇವರೆಲ್ಲ ಈ ನೆಲದ ಜನಪದ ಪ್ರತಿಭಾಗಣಿಗಳು. ಈ ಸಾಲಿನಲ್ಲಿ ಈರಬಡಪ್ಪನವರೂ ಸೇರುತ್ತಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಈರಬಡಪ್ಪನವರ ಹುಟ್ಟೂರು. ಕುರುಬ ಸಮುದಾಯಕ್ಕೆ ಸೇರಿದ ಈರಬಡಪ್ಪ ತನ್ನ ಹಳ್ಳಿಯ ಎಲ್ಲಾ ಜೀವಸತ್ವದೊಂದಿಗೆ ಬೆಳೆದು ಬಂದು ಅತ್ಯುತ್ತಮ ಕಥೆಗಾರನಾಗಿ ಈ ಪರಿಸರದಲ್ಲಿ ಜನಜನಿತ ವ್ಯಕ್ತಿಯಾಗಿದ್ದಾರೆ. ಯಾವ ಹೊತ್ತಿನಲ್ಲೇ ಆಗಲಿ ಊರಿನ ಜನ ಬಡಜ್ಜ ಕಥೆ ಹೇಳು ಅಂದರೆ ಸಾಕು ಬೇಸರಿಸಿಕೊಳ್ಳದೇ ಸರಾಗವಾಗಿ ಕಥೆ ಹೇಳಲಿಕ್ಕೆ ಶುರು ಮಾಡಿಬಿಡುತ್ತಾರೆ. ಕೇಳುವವರೇ ಕೊನೆಗೆ ಸುಸ್ತಾಗಬೇಕು. ಅಷ್ಟೊಂದು ಕಥೆಗಳು ಇವರ ಕಣಜದೊಳಗೆ ತುಂಬಿಕೊಂಡಿವೆ. ಇವರ ಕಥೆಗಳು ವಸ್ತುವೈವಿದ್ಯದಿಂದ ಕೂಡಿದ್ದು, ಅದ್ಭುತ ರಮ್ಯಲೋಕವನ್ನು ತೆರೆದಿಡುತ್ತವೆ.

ಈರಬಡಪ್ಪನವರ ಕಥೆಗಳ ಬಗ್ಗೆ ನಾಡಿನ ಗಣ್ಯವಿದ್ವಾಂಸರು ಮೆಚ್ಚುಗೆಯ ನುಡಿಬಾಗಿನ ಕೊಟ್ಟಿದ್ದಾರೆ. ಡಾ. ಜೀ.ಶಂ. ಪರಮಶಿವಯ್ಯನವರು ಈರಬಡಪ್ಪನವರ ಕಥೆಗಳನ್ನು ಆಸ್ವಾಧಿಸಿ ಹೇಳಿದ್ದು ಹೀಗೆ, "ಈರಬಡಪ್ಪನ ಕಥೆಗಳಲ್ಲಿ ಬರುವ ವಿವರಗಳು ಕತೆಗಾರರ ಲೋಕಾನುಭವವನ್ನು ನಿರೂಪಣಾ ಸಾಮರ್ಥ್ಯವನ್ನು ಕಲಾತ್ಮಕ ಪ್ರತಿಭೆಯನ್ನು ಮೆರೆಯುತ್ತವೆ. ಪ್ರತಿಯೊಂದು ಸಂಧರ್ಭದಲ್ಲಿ ಸಮುಚಿತವಾದ ಸಂಭಾಷಣೆಯಿಂದ ಕಥೆಗೆ ಸ್ವಾರಸ್ಯವನ್ನು ತುಂಬಲಾಗುತ್ತದೆ. ಈತನ ಕಥೆಗಳಲ್ಲಿ ಯಥೇಚ್ಛವಾಗಿ ಕಂಡು ಬರುವ ವರ್ಣನೆಗಳಲ್ಲಿ ಒಳ್ಳೆಯ ಕವಿ ಪ್ರತಿಭೆ ಹಾಗೂ ಸೊಬಗ ಶೈಲಿಯನ್ನು ಕಂಡುಕೊಳ್ಳಬಹುದು." ಡಾ.ಹಿ.ಶಿ. ರಾಮಚಂದ್ರೇಗೌಡರು ಈರಬಡಪ್ಪನವರು ಹೇಳುವ ಕೆಲವು ನಿರ್ಧಿಷ್ಠ ಕತೆಗಳನ್ನು ಕುರಿತಂತೆ ಹೀಗೆ ಅಭಿಪ್ರಾಯಪಡುತ್ತಾರೆ. "ಕತೆಗಾರ ಈರಬಡಪ್ಪ ಹೇಳಿರುವ 'ಬಡಕುದುರೆ ಬಡಜ್ಜ' ಕತೆಯಲ್ಲಿ ಬಡಕುದುರೆ ಅವಸಾನ ಕರುಣಾಜನಕವಾಗಿದ್ದು, ಸಾಹಿತ್ಯಕ ಕಥೆಯೊಂದರ ಅಂತ್ಯದಂತೆ ಕಂಡುಬರುತ್ತದೆ. 'ಸಾವಿತ್ರಿಸ್ವಪ್ನ' ಕತೆ ಒಂದು ವಿಶಿಷ್ಟ ವಿನ್ಯಾಸ ಮತ್ತು ಭಾಷೆಯ ವಿಶೇಷ ತೊಡಗುವಿಕೆಯಲ್ಲಿ ಸೃಷ್ಠಿಯಾಗಿದೆ. ಕನ್ನಡದಲ್ಲಿ ಇದುವರೆಗೆ ದೊರೆತಿರುವ ಇತರ ಯಾವುದೇ ಪಾಠಬೇದಕ್ಕಿಂತ ಉತ್ತಮವೆನಿಸಿದೆ."

ದೇಸಿ ಕವಿ ಎಸ್.ಜಿ. ಸಿದ್ಧರಾಮಯ್ಯನವರು ಈರಬಡಪ್ಪನವರು ಹೇಳುವ ಕಥೆಗಳು ಹಾಗೂ ಕಥೆಗಾರನ ಆತ್ಮಕಥನವನ್ನು ಕುರಿತಂತೆ ಹೇಳಿರುವ ನುಡಿಗಳವು. "ಜನಪದ ಕಥಾಕಣಜವೆಂದರೆ, ಅದು ಬಹುಮುಖೀ ನೆಲೆಯೊಳಗೆ ಈ ನೆಲದ ಜೀವನ ಪರಂಪರೆಗಳನ್ನು ದ್ರವ್ಯವಾಗಿಸಿಕೊಂಡಿರುವ ಮೌಖಿಕ ಸಂಪದದ ನೆಲೆವೀಡು ನಮ್ಮ ಜನಪದರ ಎದೆಯಂಗಳ. ಈರಬಡಪ್ಪನವರ ಕಥೆಗಳನ್ನು ಕೇಳುತ್ತಾ ಹೋದರೆ ಹಲವು ವಿಸ್ಮಯಗಳು ತೆರೆದುಕೊಳ್ಳುತ್ತವೆ.

1986ರಲ್ಲಿ ಈರಬಡಪ್ಪನವರ ಕೆಲವು ಕತೆಗಳನ್ನು 'ಕಮರಹಳ್ಳಿಯ ಕಥೆಗಳು' ಎಂಬ ಶೀರ್ಷಿಕೆಯಲ್ಲಿ ಇದೇ ಲೇಖಕನಿಂದ ಸಂಪಾದನೆಗೊಂಡು ಕೃತಿ ಪ್ರಕಟವಾಗಿರುತ್ತದೆ. ಕೃತಿಯೊಳಗಿನ ಕತೆಗಳ ಅಂತಃಸತ್ವವನ್ನು ಮನಗಂಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದರಿ ಕೃತಿಗೆ 1988ರಲ್ಲಿ ಪುಸ್ತಕ ಬಹುಮಾನವನ್ನು ನೀಡಿತು. ನಂತರ 2001ರಲ್ಲಿ ಕಥಾಕಣಜ ಈರಬಡಪ್ಪನವರಿಗೂ ಪ್ರಶಸ್ತಿ ನೀಡಿ ಗೌರವಿಸಿತು. 2007ರಲ್ಲಿ ಕಥೆಗಾರರ ಮನದಾಳದ ಕನಸಗಳು ಹೃದಯದ ಭಾವಗಳ ಆತ್ಮಕಥನ ಈ ಲೇಖಕನಿಂದ ರೂಪುಗೊಂಡು ಕನ್ನಡ ಪುಸ್ತಕ ಪ್ರಾಧೀಕಾರದಿಂದ ಕೃತಿರೂಪದಲ್ಲಿ ಪ್ರಕಟಗೊಂಡಿತು.

ಈರಬಡಪ್ಪನವರ ಪ್ರತಿಭಾ ಸಂಪತ್ತನ್ನು ಗುರುತಿಸುತ್ತಿರುವ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಈಚೆಗೆ ಮೈಸೂರಿನ ರಂಗಾಯಣ ಸಂಸ್ಥೆಗೆ ರಂಗಾಸಕ್ತರಿಗೆ ಕಥೆ ಹೇಳಿಸಿ ಗೌರವಿಸಿ ಸನ್ಮಾನ ಮಾಡಿದ್ದು ಒಂದು ವಿಶೇಷವಾಗಿತ್ತು. ಇದೀಗ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಯುತರಿಗೆ ಪ್ರಶಸ್ತಿ ಘೋಷಿಸಿರುವುದು ಈರಬಡಪ್ಪನವರ ಕಥಾ ಪ್ರತಿಭೆಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಇಂಥ ಅಪರೂಪದ ಪ್ರತಿಭೆಗಳ ಬಗ್ಗೆ ಸಾಹಿತಿ ಕಾ.ತ.ಚಿಕ್ಕಣ್ಣ ಜನಪದ ವಿದ್ವಾಂಸರಾದ ಡಾ.ಕಾಳೇಗೌಡ ನಾಗವಾರ, ಡಾ ಕೃಷ್ಣಮೂರ್ತಿ ಹನೂರು, ಡಾ ಮೀರಾಸಾಬಿಹಳ್ಳಿ ಶಿವಣ್ಣ ಇವರ ವಿಶೇಷ ಪ್ರೋತ್ಸಾಹ ಮತ್ತು ಅಗ್ಗಳಿಕೆಯನ್ನು ಈರಬಡಪ್ಪ ಪಡೆದುಕೊಂಡಿರುವುದು ಜನಪದ ಕಥಾ ಜಗತ್ತು ಜೀವಂತವಾಗಿರಲು ಸಹಕಾರಿಯಾದೀತು.

- ಉಪ್ಪಾರಹಟ್ಟಿ ಚಿತ್ತಯ್ಯ, ಚಳ್ಳಕೆರೆ.
+91 94485 67118

No comments: