Friday, May 29, 2009

ಚಿತ್ರದುರ್ಗ: ರಾಜ್ಯದ ಮೊದಲ ಖಾತೆ ತೆರೆದ ಬಿ.ಜೆ.ಪಿ.

ಐತಿಹಾಸಿಕ ಜಿಲ್ಲೆಯಾದ ಚಿತ್ರದುರ್ಗವು ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಮಾಡುವುದರಲ್ಲಿ ಕೂಡ ಇತಿಹಾಸ ಸೃಷ್ಟಿಸಿತು. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ 11ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಜನಾರ್ಧನಸ್ವಾಮಿ(ಬಿ.ಜೆ.ಪಿ), ಡಾ.ಬಿ.ತಿಪ್ಪೇಸ್ವಾಮಿ (ಕಾಂಗ್ರೆಸ್), ಎಂ.ಜಯಣ್ಣ (ಬಿ.ಎಸ್.ಪಿ), ಶಶಿಶೇಖರನಾಯ್ಕ್ (ಆರ್.ಜೆ.ಡಿ), ಎಂ.ಕುಂಬಯ್ಯ, ಗಣೇಶ್, ಕೆ.ಎಚ್.ದುರ್ಗಸಿಂಹ, ರಾಮಚಂದ್ರ, ಬಿ.ಸುಜಾತಾ ಮತ್ತು ಹನುಮಂತಪ್ಪ ತೇಗನೂರು ರವರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದರು.

ಮತಬಾಂಧವರು ಈ ಬಾರಿ ತಮ್ಮ ನಿಲುವನ್ನು ಬದಲಿಸಿಕೊಂಡಂತೆ ಕಂಡಿದ್ದು, ಬಿ.ಜೆ.ಪಿ. ಪಕ್ಷದಿಂದ ಸ್ಪರ್ಧಿಸಿದ ಶ್ರೀ ಜನಾರ್ಧನಸ್ವಾಮಿ, ರವರನ್ನು 1,35,656 ಮತಗಳ ಅಂತರದಿಂದ ಜಯಭೇರಿ ಸಾಧಿಸುವಂತೆ ಅದೃಷ್ಟವನ್ನು ಕರುಣಿಸಿದ್ದಾರೆ. ಬಿ.ಜೆ.ಪಿ.ಯ ಜನಾರ್ಧನಸ್ವಾಮಿರವರಿಗೆ 3,70,962 ಮತಗಳು ಹಾಗೂ ಕಾಂಗ್ರೆಸ್ ನ ಡಾ.ಬಿ.ತಿಪ್ಪೇಸ್ವಾಮಿ ರವರಿಗೆ 2,35,306 ಮತಗಳನ್ನು ಹಾಕುವುದರ ಮೂಲಕ ಮತದಾರ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾನೆ.

ಫಲಿತಾಂಶ ಪ್ರಕಟಣೆ ನಂತರ ಸುದ್ದಿಗಾರರೊಂದಿಗೆ ಮಾಡುತ್ತಾ, ಬಿ.ಜೆ.ಪಿ. ಪಕ್ಷದ ಜನಪ್ರಿಯತೆ, ಸಾಧನೆಗಳು, ಕಾರ್ಯಕರ್ತರ ಬೆಂಬಲದಿಂದಾಗಿ ವಿಜಯಮಾಲೆ ಧರಿಸಿರುವುದಾಗಿ ಹೇಳಿದರು. ಅಲ್ಲದೇ ಚಿತ್ರದುರ್ಗ ಕ್ಷೇತ್ರವು ಹಿಂದುಳಿದ ಕ್ಷೇತ್ರವಾಗಿದ್ದು, ರೈಲ್ವೆ, ಪ್ರವಾಸೋದ್ಯಮ, ಕೈಗಾರಿಕಾ ಸ್ಥಾಪನೆ, ಉದ್ಯೋಗ ಸೃಜನೆ, ಇತ್ಯಾದಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ಆದ್ಯತೆ ನೀಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದಾಗಿ ಹೇಳಿದರು.

ಚುನಾವಣಾ ಫಲಿತಾಂಶ ಪ್ರಕಟಣೆ: ರಾಜ್ಯದಲ್ಲಿ ಚಿತ್ರದುರ್ಗ ಪ್ರಥಮ

2009ನೇ ಸಾಲಿನ ಲೋಕಸಭಾ ಚುನಾವಣೆ ಫಲಿತಾಂಶ ನಿರೀಕ್ಷತ ಮಟ್ಟದಲ್ಲಿ ಹೊರಬಿದ್ದಿದ್ದು ಆಶ್ಚರ್ಯವಲ್ಲ. ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಹಿರಿಯೂರು, ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳನ್ನು ಒಳಪಟ್ಟಿದ್ದು, ಅಲ್ಲಿಯ ಮತದಾರರು ನಿರ್ಧರಿಸಿದ ಫಲಿತಾಂಶವನ್ನು ಹೊರಗೆಡವಲು ಚಿತ್ರದುರ್ಗವು ಸನ್ನದ್ಧವಾಗಿದೆ. ಚಿತ್ರದುರ್ಗ ಜಿಲ್ಲಾ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ (NIC) ಶ್ರೀ ಹೆಚ್.ಎನ್. ರವಿಶಂಕರ್, D.I.O.,ಹಾಗೂ ಶ್ರೀ ಕೆ.ರಾಮಕೃಷ್ಣಶಾಸ್ತ್ರಿ, D.I.A., ರವರ ನೇತೃತ್ವದ ತಾಂತ್ರಿಕ ತಂಡವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಜಯ ಸಾಧಿಸಿದೆ. ಇದಕ್ಕೆ ಈಗಾಗಲೇ 3-4ಬಾರಿ ತರಬೇತಿ ನೀಡಿರುವುದು ಸಹ ಕಾರಣವಾಗಿದ್ದರೆ, ತಂಡದಲ್ಲಿದ್ದ ದೀಪಕ್, ಮಂಜುನಾಥ ಪಾಟೀಲ್, ಪಾಷ, ಶ್ರೀಶೈಲ ಪ್ರಕಾಶ್ (Network Eng.), ಉಮೇಶ್, ಆರ್.ರಾಘವೇಂದ್ರ(ಚಿತ್ತಾರದುರ್ಗ), ಮಹೇಶ್, ಗೋವಿಂದರಾಜ್, ವಸಂತಕುಮಾರ್, ಅರ್ಜುನ್, ವರುಣ್, ಮಧುಸೂಧನ್, ಆದರ್ಶ, ಸುನೀತ, ಶ್ವೇತಾ, ಉಮಲತಾ, ಪದ್ಮಾಕ್ಷಿ, ಶಭಾನಾ, ಸಾಧಿಕ್, ಮಧು, ನಾಗರಾಜ್, ರಾಜುಗೌಡ, ಅರವಿಂದ, ಗೋವಿಂದನಾಯ್ಕ್, ಶಂಭುಲಿಂಗಪಾಟೀಲ ಮುಂತಾದವರಿಗೆ ಉತ್ಸಾಹ ತುಂಬುವುದರಲ್ಲಿ ನಿರಂತರ ಕಾರ್ಯೋನ್ಮುಖರಾಗಿದ್ದ ಶ್ರೀ ಹೆಚ್.ಎನ್.ರವಿಶಂಕರ್ ಹಾಗೂ ಶ್ರೀ ಕೆ.ರಾಮಕೃಷ್ಣಶಾಸ್ತ್ರಿ ಯವರು ಕಾರಣ. ಆದರೆ ಎಲ್ಲರಿಗಿಂತ ತಡವಾಗಿ ಮತ ಎಣಿಕೆ ಕಾರ್ಯ ಮುಗಿಯಬೇಕಾಗಿದ್ದ ಪಾವಗಡ ಮತ್ತು ಚಳ್ಳಕೆರೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆಶ್ಚರ್ಯಕರ ರೀತಿಯಲ್ಲಿ ಮೊದಲು ಮುಗಿದಿತ್ತು.

ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದಂತೆ ಹಾಗೂ ಚಳ್ಳಕೆರೆ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ವಿಳಂಬವಾಗುವುದೆಂದು ಜಿಲ್ಲಾಧಿಕಾರಿಗಳು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಆದರೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಹಾಗೂ ದೇಶದಲ್ಲಿಯೇ 3ನೇ ಸ್ಥಾನವನ್ನು ಪಡೆದು ಚುನಾವಣಾ ಫಲಿತಾಂಶವನ್ನು ಹೊರಹಾಕುವಲ್ಲಿ NICಯ ಅಧಿಕಾರಿಗಳ ಶ್ರಮ ಹಾಗೂ ಕಾರ್ಯದಕ್ಷತೆ ಕಾರಣ. ಆ ದಿನ ಬೆಳಿಗ್ಗೆ 10.55ರ ಸುಮಾರಿಗೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಕಾರ್ಯ ಮುಕ್ತಾಯಗೊಂಡಿದ್ದು, ಸುಮಾರು 11.10ಕ್ಕೆ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಚುನಾವಣಾ ಫಲಿತಾಂಶವನ್ನು ಪ್ರಕಟಣೆ ಮಾಡಿದರು.

ರಾಜ್ಯದಲ್ಲಿಯೇ ಪ್ರಥಮವಾಗಿ ಹಾಗೂ ದೇಶದಲ್ಲಿಯೇ ತೃತಿಯವಾಗಿ ಫಲಿತಾಂಶ ಪ್ರಕಟ ಮಾಡಿದ್ದರಿಂದ NICಯ ಸಿಬ್ಬಂದಿಗೆ ಹಾಗೂ ಚುನಾವಣಾ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ನೂತನ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಭಿನಂದಿಸಿದರು.

Thursday, April 2, 2009

'ದುರ್ಗದ ಸಿರಿ'ಯಜ್ಜಿ ಇನ್ನಿಲ್ಲ...!


ಕನ್ನಡ ಸಾಹಿತ್ಯ ಪ್ರಪಂಚದ ಅನರ್ಘ್ಯರತ್ನ ಜಾನಪದ ಸಾಹಿತ್ಯ ಇಂತಹ ಜಾನಪದ ರತ್ನಗಳ ಅಸಾಧಾರಣ ಸ್ಮರಣಶಕ್ತಿಯ ಜನಪದಸಿರಿ ಸಿರಿಯಜ್ಜಿ. ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ಅಜ್ಜಿಯ ಹುಟ್ಟೂರು. ಈರಪ್ಪ-ಕಾಡಮ್ಮ ದಂಪತಿಗಳ ಮಗಳು. ವಿದ್ಯಾಭ್ಯಾಸದಿಂದ ವಂಚಿತಳಾದರೂ ಸಹ ವಿದ್ವತ್ತನ ಗಣಿಯಾಗಿ ಹತ್ತು ಸಾವಿರ ಪದಗಳ ಒಡತಿಯಾಗಿ ಜನಮನ ಗೆದ್ದಿದ್ದಾರೆ.
ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ನಮ್ಮ ಸಂಸ್ಕೃತಿ ಜೀವಂತ ಪಳೆಯುಳಕೆ, ಇವರ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಯಿಂದಾಗಿ ತಮ್ಮದೇ ಆದ ವೈಶಿಷ್ಟವನ್ನು ಮೆರಿದಿದ್ದಾರೆ. ಅಂತಹ ಹಬ್ಬಹರಿದಿನಗಳ ಆಚರಣೆ, ಮದುವೆಯ ಸಮಾರಂಭಗಳಲ್ಲಿ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆಅಲೆಯಾಗಿ ಹರಿದುಬರುತ್ತೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಹಾದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ನಮ್ಮ ಮುಂದಿದೆ ."ಮಹಸತಿ ಕಾಟವ್ವ”, ”ಕತ್ತಲೆ ದಾರಿದೂರ” ಎನ್ನುವ ಕತನಗೀತೆಗಳು ಜನಮನ ಗೆದ್ದಿವೆ. ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿಪರವಶರನ್ನಾಗಿಸಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾಯರು ‘ಜನಪದಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಿದ್ದಾರೆ. ನಾಡಿನ ಪ್ರತಿಷ್ಟಿತ ಪ್ರಶಸ್ತಿಯಾದಂತಹ ನಾಡೋಜ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡಿ ಗೌರವಿಸಿದೆ. ಹಾಗೂ ಕರ್ನಾಟಕ ಜನಪದ ಅಕಾಡೆಮಿಯ ಜಾನಪದಶ್ರೀ ಎಂಬ ಬಿರುದನ್ನು ನೀಡಿ ಪುರಸ್ಕರಿಸಿದೆ. ಅನೇಕ ಸಂಘ-ಸಂಸ್ಥೆಗಳು, ಜನಪದ ಮೇಳ, ಮಠಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ ‘ನಡೆದಾಡುವ ಜಾನಪದಕೋಶ’ ವಾಗಿದ್ದಾರೆ.
ನಮ್ಮ ಚಿತ್ರದುರ್ಗ ನಿಜವಾದ ಜಾನಪದ ಸಿರಿ ಎಂದರೆ ಸಿರಿಯಜ್ಜಿ. ಹತ್ತು ಸಾವಿರ ಜಾನಪದ ಗೀತೆಗಳನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದಲೇ ಹಾಡುವ, ಅನಕ್ಷರಸ್ಥ ವಯೋವೃದ್ದೆ ನಮ್ಮ "ಸಿರಿಯಜ್ಜಿ".

ಇಂಥಾ ಅಪರೂಪದ "ಜಾನಪದ ಸಿರಿ" ಇಂದು ಬೆಳಿಗ್ಗೆ ನಮ್ಮನ್ನಗಲಿ ಸ್ವರ್ಗದಲ್ಲಿ ಲೀನವಾಯಿತು. ದಿನಾಂಕ: 02-04-2009ರ ಬೆಳಿಗ್ಗೆ 9-30ಕ್ಕೆ ಸಿರಿಯಜ್ಜಿ ದೈವಾಧೀನರಾಗಿರುತ್ತಾರೆ. ಜಿಲ್ಲೆಯ ಕಣ್ಮಣಿ ಸಿರಿಗೆ ಚಿರಶಾಂತಿ ಸಿಗಲೆಂದು ಚಿತ್ತಾರದುರ್ಗ ಬಳಗ ಹಾರೈಸುತ್ತದೆ.

Wednesday, January 7, 2009

ಚಿತ್ತಾರದುರ್ಗ ಪತ್ರಿಕಾ ವರದಿಗಳು - 2


ಚಿತ್ತಾರದುರ್ಗ ಪತ್ರಿಕಾ ವರದಿ - 1

ಸಾಹಿತ್ಯ ಜಾತ್ರೆ

ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದ್ದು, ಬರದ ನಾಡಲ್ಲಿ ಸಾಹಿತ್ಯ ಜಾತ್ರೆಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಒಂದೆಡೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾಹಿತ್ಯಪೂರಕ ಚಟುವಟಿಕೆಗಳು ತುಸು ಬಿರುಸಾಗಿವೆ. ಇದೆಲ್ಲದರ ನಡುವೆ ಸಮ್ಮೇಳನದ ದೇಣಿಗೆ ಅಭಿಮಾನದ ಸ್ವರೂಪ ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ.
ಒಂದೆರಡು ತಿಂಗಳು ಹಿಂದಕ್ಕೆ ಹೋಗಿ ಆಲೋಚಿಸಿದರೆ ಅಂದಿನ ಪರಿಸ್ಥಿತಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸಗಳು ಗೋಚರಿಸುತ್ತದೆ. ಸಮ್ಮೇಳನದ ದಿನಾಂಕ ಘೋಷಣೆಯಾದ ಮೇಲೆ ಮೂಲಸೌಕರ್ಯಗಳಿಲ್ಲ, ಮಲಗೋಕೆ ಜಾಗಗಳಿಲ್ಲ, ಓಡಾಡಲು ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಇದೆಲ್ಲ ಹೊರತಾಗಿ ದೇಣಿಗೆ ಯಾರು ಕೊಡ್ತಾರೆ? ಎಂಬಂತೆ ಇತ್ಯಾದಿ ಅಪಸ್ವರದ ರಾಗಗಳು ಕೇಳಿಬಂದವು. ಸುಮ್ಮನೇ ಕುಳಿತು ಆಲೋಚಿಸುವವರಿಗೆ ಇದೆಲ್ಲ ನಿಜವೆಂಬ ಭಾವನೆಗಳು ಮೂಡಿರಬಹುದು. ಆದರೆ ಸಾಹಿತ್ಯ ಜಾತ್ರೆಗೆ ಇಂತದ್ದೊಂದು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಯಾರೂ ಊಹಿಸದಷ್ಟು ರೀತಿಯಲ್ಲಿ ಚಟುವಟಿಕೆಗಳು ನೆಡಯುತ್ತಿರುವುದು ಅಚ್ಚರಿ ತರಿಸಿದೆ.
ಸರ್ಕಾರಿ ನೌಕರರು ಉದ್ಯಮಿಗಳು, ವರ್ತಕರು, ಸಂಘಸಂಸ್ಥೆಗಳು, ಉದಾರವಾಗಿ ದೇಣಿಗೆ ನೀಡುವ ತೀರ್ಮಾನ ಕೈಗೊಂಡಿರುವುದು ಬಯಲು ಸೀಮೆ ಎಂಬ 'ಕಹಿ' ಬರಹ ತುಸು ಮರೆಮಾಚಿದಂತಾಗಿದೆ. ಕೇವಲ ಹದಿನೈದು ದಿನದ ಅಂತರದಲ್ಲಿ ಅರ್ಧ ಕೋಟಿಯಷ್ಟು ಹಣ ದೇಣಿಗೆ ರೂಪದಲ್ಲಿ ಸಮ್ಮೇಳನ ಸಮಿತಿಗೆ ಜಮಾ ಆಗಿರುವುದೇ ಇದಕ್ಕೆ ಸಾಕ್ಷಿ. ಇದಲ್ಲದೇ ಆಹಾರ ಪದಾರ್ಥಗಳು ಕೂಡ ಸಂಗ್ರಹವಾಗುತ್ತಿದೆ

ಚಿತ್ತಾರದುರ್ಗ ಸಂಭ್ರಮದ ಫೋಟೋ ಗ್ಯಾಲರಿ

ಕುಮಾರಿ ನಮ್ರತ ಪ್ರಾರ್ಥಿಸಿದರು

ಚಿತ್ತಾರದುರ್ಗ ನಿರ್ಮಾತೃ "ಆರ್.ರಾಘವೇಂದ್ರ" ಸ್ವಾಗತಿಸಿದರು

ಡಾ. ಸಿ.ಶಿವಲಿಂಗಪ್ಪ ರವರು ಪ್ರಾಸ್ತಾವಿಕ ನುಡಿ ಭಾಷಣ ಮಾಡಿದರು.

ಚಳ್ಳಕೆರೆಯ ಜನಪ್ರಿಯ ಶಾಸಕರಾದ ತಿಪ್ಪೇಸ್ವಾಮಿ ರವರು ಮುಖ್ಯಅತಿಥಿಗಳ ಭಾಷಣ ಮಾಡಿದರು

ತಹಶೀಲ್ದಾರ್ ಹೆಚ್.ಜ್ಞಾನೇಶ್ ಭಾಷಣ ಮಾಡಿದರು


ಚಿತ್ತಾರದುರ್ಗದ ನಿರ್ಮಾತೃ ಭರತ್ ಕುಮಾರ್ ವಂದನೆ ಸಲ್ಲಿಸಿದರು.


ಆರ್.ರಾಘವೇಂದ್ರ ರವರು ಶಾಸಕರಿಗೆ ಪುಷ್ಪಮಾಲಿಕೆಯನ್ನು ಅರ್ಪಿಸುತ್ತಿರುವುದು

ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ರವರಿಗೆ ಪುಷ್ಪಮಾಲಿಕೆಯನ್ನು ಅರ್ಪಿಸುತ್ತಿರುವುದು

ಚಿತ್ತಾರದುರ್ಗದ ನಿರ್ಮಾತೃಗಳು: ಆರ್.ರಾಘವೇಂದ್ರ - ಬಿ.ವಿ.ಭರತ್ ಕುಮಾರ್