Friday, May 29, 2009

ಚಿತ್ರದುರ್ಗ: ರಾಜ್ಯದ ಮೊದಲ ಖಾತೆ ತೆರೆದ ಬಿ.ಜೆ.ಪಿ.

ಐತಿಹಾಸಿಕ ಜಿಲ್ಲೆಯಾದ ಚಿತ್ರದುರ್ಗವು ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಮಾಡುವುದರಲ್ಲಿ ಕೂಡ ಇತಿಹಾಸ ಸೃಷ್ಟಿಸಿತು. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ 11ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಜನಾರ್ಧನಸ್ವಾಮಿ(ಬಿ.ಜೆ.ಪಿ), ಡಾ.ಬಿ.ತಿಪ್ಪೇಸ್ವಾಮಿ (ಕಾಂಗ್ರೆಸ್), ಎಂ.ಜಯಣ್ಣ (ಬಿ.ಎಸ್.ಪಿ), ಶಶಿಶೇಖರನಾಯ್ಕ್ (ಆರ್.ಜೆ.ಡಿ), ಎಂ.ಕುಂಬಯ್ಯ, ಗಣೇಶ್, ಕೆ.ಎಚ್.ದುರ್ಗಸಿಂಹ, ರಾಮಚಂದ್ರ, ಬಿ.ಸುಜಾತಾ ಮತ್ತು ಹನುಮಂತಪ್ಪ ತೇಗನೂರು ರವರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದರು.

ಮತಬಾಂಧವರು ಈ ಬಾರಿ ತಮ್ಮ ನಿಲುವನ್ನು ಬದಲಿಸಿಕೊಂಡಂತೆ ಕಂಡಿದ್ದು, ಬಿ.ಜೆ.ಪಿ. ಪಕ್ಷದಿಂದ ಸ್ಪರ್ಧಿಸಿದ ಶ್ರೀ ಜನಾರ್ಧನಸ್ವಾಮಿ, ರವರನ್ನು 1,35,656 ಮತಗಳ ಅಂತರದಿಂದ ಜಯಭೇರಿ ಸಾಧಿಸುವಂತೆ ಅದೃಷ್ಟವನ್ನು ಕರುಣಿಸಿದ್ದಾರೆ. ಬಿ.ಜೆ.ಪಿ.ಯ ಜನಾರ್ಧನಸ್ವಾಮಿರವರಿಗೆ 3,70,962 ಮತಗಳು ಹಾಗೂ ಕಾಂಗ್ರೆಸ್ ನ ಡಾ.ಬಿ.ತಿಪ್ಪೇಸ್ವಾಮಿ ರವರಿಗೆ 2,35,306 ಮತಗಳನ್ನು ಹಾಕುವುದರ ಮೂಲಕ ಮತದಾರ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾನೆ.

ಫಲಿತಾಂಶ ಪ್ರಕಟಣೆ ನಂತರ ಸುದ್ದಿಗಾರರೊಂದಿಗೆ ಮಾಡುತ್ತಾ, ಬಿ.ಜೆ.ಪಿ. ಪಕ್ಷದ ಜನಪ್ರಿಯತೆ, ಸಾಧನೆಗಳು, ಕಾರ್ಯಕರ್ತರ ಬೆಂಬಲದಿಂದಾಗಿ ವಿಜಯಮಾಲೆ ಧರಿಸಿರುವುದಾಗಿ ಹೇಳಿದರು. ಅಲ್ಲದೇ ಚಿತ್ರದುರ್ಗ ಕ್ಷೇತ್ರವು ಹಿಂದುಳಿದ ಕ್ಷೇತ್ರವಾಗಿದ್ದು, ರೈಲ್ವೆ, ಪ್ರವಾಸೋದ್ಯಮ, ಕೈಗಾರಿಕಾ ಸ್ಥಾಪನೆ, ಉದ್ಯೋಗ ಸೃಜನೆ, ಇತ್ಯಾದಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ಆದ್ಯತೆ ನೀಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದಾಗಿ ಹೇಳಿದರು.

ಚುನಾವಣಾ ಫಲಿತಾಂಶ ಪ್ರಕಟಣೆ: ರಾಜ್ಯದಲ್ಲಿ ಚಿತ್ರದುರ್ಗ ಪ್ರಥಮ

2009ನೇ ಸಾಲಿನ ಲೋಕಸಭಾ ಚುನಾವಣೆ ಫಲಿತಾಂಶ ನಿರೀಕ್ಷತ ಮಟ್ಟದಲ್ಲಿ ಹೊರಬಿದ್ದಿದ್ದು ಆಶ್ಚರ್ಯವಲ್ಲ. ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಹಿರಿಯೂರು, ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳನ್ನು ಒಳಪಟ್ಟಿದ್ದು, ಅಲ್ಲಿಯ ಮತದಾರರು ನಿರ್ಧರಿಸಿದ ಫಲಿತಾಂಶವನ್ನು ಹೊರಗೆಡವಲು ಚಿತ್ರದುರ್ಗವು ಸನ್ನದ್ಧವಾಗಿದೆ. ಚಿತ್ರದುರ್ಗ ಜಿಲ್ಲಾ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ (NIC) ಶ್ರೀ ಹೆಚ್.ಎನ್. ರವಿಶಂಕರ್, D.I.O.,ಹಾಗೂ ಶ್ರೀ ಕೆ.ರಾಮಕೃಷ್ಣಶಾಸ್ತ್ರಿ, D.I.A., ರವರ ನೇತೃತ್ವದ ತಾಂತ್ರಿಕ ತಂಡವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಜಯ ಸಾಧಿಸಿದೆ. ಇದಕ್ಕೆ ಈಗಾಗಲೇ 3-4ಬಾರಿ ತರಬೇತಿ ನೀಡಿರುವುದು ಸಹ ಕಾರಣವಾಗಿದ್ದರೆ, ತಂಡದಲ್ಲಿದ್ದ ದೀಪಕ್, ಮಂಜುನಾಥ ಪಾಟೀಲ್, ಪಾಷ, ಶ್ರೀಶೈಲ ಪ್ರಕಾಶ್ (Network Eng.), ಉಮೇಶ್, ಆರ್.ರಾಘವೇಂದ್ರ(ಚಿತ್ತಾರದುರ್ಗ), ಮಹೇಶ್, ಗೋವಿಂದರಾಜ್, ವಸಂತಕುಮಾರ್, ಅರ್ಜುನ್, ವರುಣ್, ಮಧುಸೂಧನ್, ಆದರ್ಶ, ಸುನೀತ, ಶ್ವೇತಾ, ಉಮಲತಾ, ಪದ್ಮಾಕ್ಷಿ, ಶಭಾನಾ, ಸಾಧಿಕ್, ಮಧು, ನಾಗರಾಜ್, ರಾಜುಗೌಡ, ಅರವಿಂದ, ಗೋವಿಂದನಾಯ್ಕ್, ಶಂಭುಲಿಂಗಪಾಟೀಲ ಮುಂತಾದವರಿಗೆ ಉತ್ಸಾಹ ತುಂಬುವುದರಲ್ಲಿ ನಿರಂತರ ಕಾರ್ಯೋನ್ಮುಖರಾಗಿದ್ದ ಶ್ರೀ ಹೆಚ್.ಎನ್.ರವಿಶಂಕರ್ ಹಾಗೂ ಶ್ರೀ ಕೆ.ರಾಮಕೃಷ್ಣಶಾಸ್ತ್ರಿ ಯವರು ಕಾರಣ. ಆದರೆ ಎಲ್ಲರಿಗಿಂತ ತಡವಾಗಿ ಮತ ಎಣಿಕೆ ಕಾರ್ಯ ಮುಗಿಯಬೇಕಾಗಿದ್ದ ಪಾವಗಡ ಮತ್ತು ಚಳ್ಳಕೆರೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆಶ್ಚರ್ಯಕರ ರೀತಿಯಲ್ಲಿ ಮೊದಲು ಮುಗಿದಿತ್ತು.

ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದಂತೆ ಹಾಗೂ ಚಳ್ಳಕೆರೆ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ವಿಳಂಬವಾಗುವುದೆಂದು ಜಿಲ್ಲಾಧಿಕಾರಿಗಳು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಆದರೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಹಾಗೂ ದೇಶದಲ್ಲಿಯೇ 3ನೇ ಸ್ಥಾನವನ್ನು ಪಡೆದು ಚುನಾವಣಾ ಫಲಿತಾಂಶವನ್ನು ಹೊರಹಾಕುವಲ್ಲಿ NICಯ ಅಧಿಕಾರಿಗಳ ಶ್ರಮ ಹಾಗೂ ಕಾರ್ಯದಕ್ಷತೆ ಕಾರಣ. ಆ ದಿನ ಬೆಳಿಗ್ಗೆ 10.55ರ ಸುಮಾರಿಗೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಕಾರ್ಯ ಮುಕ್ತಾಯಗೊಂಡಿದ್ದು, ಸುಮಾರು 11.10ಕ್ಕೆ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಚುನಾವಣಾ ಫಲಿತಾಂಶವನ್ನು ಪ್ರಕಟಣೆ ಮಾಡಿದರು.

ರಾಜ್ಯದಲ್ಲಿಯೇ ಪ್ರಥಮವಾಗಿ ಹಾಗೂ ದೇಶದಲ್ಲಿಯೇ ತೃತಿಯವಾಗಿ ಫಲಿತಾಂಶ ಪ್ರಕಟ ಮಾಡಿದ್ದರಿಂದ NICಯ ಸಿಬ್ಬಂದಿಗೆ ಹಾಗೂ ಚುನಾವಣಾ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ನೂತನ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಭಿನಂದಿಸಿದರು.