Thursday, April 2, 2009

'ದುರ್ಗದ ಸಿರಿ'ಯಜ್ಜಿ ಇನ್ನಿಲ್ಲ...!


ಕನ್ನಡ ಸಾಹಿತ್ಯ ಪ್ರಪಂಚದ ಅನರ್ಘ್ಯರತ್ನ ಜಾನಪದ ಸಾಹಿತ್ಯ ಇಂತಹ ಜಾನಪದ ರತ್ನಗಳ ಅಸಾಧಾರಣ ಸ್ಮರಣಶಕ್ತಿಯ ಜನಪದಸಿರಿ ಸಿರಿಯಜ್ಜಿ. ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ಅಜ್ಜಿಯ ಹುಟ್ಟೂರು. ಈರಪ್ಪ-ಕಾಡಮ್ಮ ದಂಪತಿಗಳ ಮಗಳು. ವಿದ್ಯಾಭ್ಯಾಸದಿಂದ ವಂಚಿತಳಾದರೂ ಸಹ ವಿದ್ವತ್ತನ ಗಣಿಯಾಗಿ ಹತ್ತು ಸಾವಿರ ಪದಗಳ ಒಡತಿಯಾಗಿ ಜನಮನ ಗೆದ್ದಿದ್ದಾರೆ.
ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ನಮ್ಮ ಸಂಸ್ಕೃತಿ ಜೀವಂತ ಪಳೆಯುಳಕೆ, ಇವರ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಯಿಂದಾಗಿ ತಮ್ಮದೇ ಆದ ವೈಶಿಷ್ಟವನ್ನು ಮೆರಿದಿದ್ದಾರೆ. ಅಂತಹ ಹಬ್ಬಹರಿದಿನಗಳ ಆಚರಣೆ, ಮದುವೆಯ ಸಮಾರಂಭಗಳಲ್ಲಿ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆಅಲೆಯಾಗಿ ಹರಿದುಬರುತ್ತೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಹಾದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ನಮ್ಮ ಮುಂದಿದೆ ."ಮಹಸತಿ ಕಾಟವ್ವ”, ”ಕತ್ತಲೆ ದಾರಿದೂರ” ಎನ್ನುವ ಕತನಗೀತೆಗಳು ಜನಮನ ಗೆದ್ದಿವೆ. ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿಪರವಶರನ್ನಾಗಿಸಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾಯರು ‘ಜನಪದಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಿದ್ದಾರೆ. ನಾಡಿನ ಪ್ರತಿಷ್ಟಿತ ಪ್ರಶಸ್ತಿಯಾದಂತಹ ನಾಡೋಜ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡಿ ಗೌರವಿಸಿದೆ. ಹಾಗೂ ಕರ್ನಾಟಕ ಜನಪದ ಅಕಾಡೆಮಿಯ ಜಾನಪದಶ್ರೀ ಎಂಬ ಬಿರುದನ್ನು ನೀಡಿ ಪುರಸ್ಕರಿಸಿದೆ. ಅನೇಕ ಸಂಘ-ಸಂಸ್ಥೆಗಳು, ಜನಪದ ಮೇಳ, ಮಠಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ ‘ನಡೆದಾಡುವ ಜಾನಪದಕೋಶ’ ವಾಗಿದ್ದಾರೆ.
ನಮ್ಮ ಚಿತ್ರದುರ್ಗ ನಿಜವಾದ ಜಾನಪದ ಸಿರಿ ಎಂದರೆ ಸಿರಿಯಜ್ಜಿ. ಹತ್ತು ಸಾವಿರ ಜಾನಪದ ಗೀತೆಗಳನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದಲೇ ಹಾಡುವ, ಅನಕ್ಷರಸ್ಥ ವಯೋವೃದ್ದೆ ನಮ್ಮ "ಸಿರಿಯಜ್ಜಿ".

ಇಂಥಾ ಅಪರೂಪದ "ಜಾನಪದ ಸಿರಿ" ಇಂದು ಬೆಳಿಗ್ಗೆ ನಮ್ಮನ್ನಗಲಿ ಸ್ವರ್ಗದಲ್ಲಿ ಲೀನವಾಯಿತು. ದಿನಾಂಕ: 02-04-2009ರ ಬೆಳಿಗ್ಗೆ 9-30ಕ್ಕೆ ಸಿರಿಯಜ್ಜಿ ದೈವಾಧೀನರಾಗಿರುತ್ತಾರೆ. ಜಿಲ್ಲೆಯ ಕಣ್ಮಣಿ ಸಿರಿಗೆ ಚಿರಶಾಂತಿ ಸಿಗಲೆಂದು ಚಿತ್ತಾರದುರ್ಗ ಬಳಗ ಹಾರೈಸುತ್ತದೆ.