Sunday, November 2, 2008

ಕರ್ನಾಟಕ ಕಲಾಶ್ರೀ ವಿದ್ವಾನ್ ಬಿ.ಗುರುಸಿದ್ದಪ್ಪ

ಚಾರಿತ್ರಿಕ ಚಿತ್ರದುರ್ಗ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ಸಾಕಷ್ಟು ತಿಳಿದಿರುವ ಕೆಲವೇ ಜನರಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ಶ್ರೀ ಬಿ.ಗುರುಸಿದ್ದಪ್ಪವರೂ ಒಬ್ಬರು. ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿಯ ಕೃಷಿಕ ದಂಪತಿಗಳಾದ ಶ್ರೀ ಬಸಪ್ಪ ಮತ್ತು ಶ್ರೀಮತಿ ರುದ್ರಮ್ಮ ದಂಪತಿಗಳ ಮಗನಾಗಿ ಜನಿಸಿದ ಗುರುಸಿದ್ದಪ್ಪನವರಿಗೆ ಬಾಲ್ಯದಿಂದಲೆ ಕಲೆಯ ಗೀಳು. ಸಂಗೀತ ಕಲಿಯುವ ಹುಚ್ಚು. ಹಿರಿಯರಾದ ಶ್ರೀ ಬಿ.ಪಿ.ಮಲ್ಲರೆಡ್ಡಿಯವರಲ್ಲಿ ಸಂಗೀತಾಬ್ಯಾಸ ಮಾಡಿದ ಗುರುಸಿದ್ದಪ್ಪನವರು, ನಾಟಕ ರಂಗದಲ್ಲಿ ಅಭಿರುಚಿ ಬೆಳಿಸಿಕೊಂಡರು. ಜೊತೆಗೆ ತಬಲ, ಮೃದಂಗ, ಹಾರಮೋನಿಯಂ ಮತ್ತು ಪಿಟೀಲು ವಾದ್ಯವಾದನಗಳಲ್ಲೂ ತರಬೇತಿ ಪಡೆದರು. ಇವುಗಳೊಂದಿಗೆ ಎಂ.ಎ. ಪದವಿಯನ್ನುಗಳಿಸಿ ಶಿಕ್ಷಕರಾಗಿ ಸರ್ಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡರು.

ರಂಗಭೂಮಿಯ ನಿರಂತರ ಸಂರ್ಪಕವಿಟ್ಟುಕೊಂಡ ಇವರು ನಾಟಕ ನಿರ್ದೇಶನ, ಸಂಗೀತ ಸಂಯೋಜನೆ ಹಾಗು ಪಾತ್ರ ನಿರ್ವಹಣೆಯಲ್ಲೂ ಎತ್ತಿದ ಕೈ . ತ್ಯಾಗ, ಭಕ್ತ ಸುಧನ್ವ, ಗ್ರಾಮ ಸುಧಾರಣೆ, ಝಾನ್ಸಿರಾಣಿ, ರಾಷ್ಟ್ರಪ್ರೇಮ, ಅಪೂರ್ವ ಮಿತ್ರರು , ಹಣೆ ಬರಹ ಹೀಗೆ ಹಲವಾರು ನಾಟಕಗಳನ್ನು ಸ್ವತಃ ರಚಿಸಿ ರಂಗ ಪ್ರದರ್ಶನಗೊಳಿಸಿದರು. ಶ್ರೀ ಗುರು ಕಲಾವೃಂದ ವೆಂಬ ತಂಡ ರೂಪಿಸಿ. ಆಂಧ್ರ ಕರ್ನಾಟಕ ರಾಜ್ಯಗಳ ಗ್ರಾಮಾಂತಾರ ಭಾಗಗಳಲ್ಲೂ ನಾಟಕ ಪ್ರದರ್ಶಿಸಿ ಮೆಚ್ಚುಗೆ ಪಡೆದವರು. ಕರ್ನಾಟಕ ಶಾಸ್ತ್ರಿಯ ಸಂಗೀತ ತರಬೇತಿಯನ್ನು ಚಳ್ಳಕೆರೆಯಲ್ಲಿ ನೀಡಲು ಪ್ರಾರಭಿಸಿದರು. ಕಥಾ ಕೀರ್ತನೆಯಲ್ಲೂ ಪಾಂಡಿತ್ಯ ಹೊಂದಿರುವ ಶ್ರೀಯುತರು ಕೀರ್ತನಾ ಕ್ಷೇತ್ರದಲ್ಲೂ ತಮ್ಮದೇ ಆದ ವಿಶೇಷತೆ ಮೆರೆದಿದ್ದಾರೆ. 1950 ರಿಂದಲೂ ಶಿಕ್ಷಣ ,ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿಕಟ ಸಂಪರ್ಕವನ್ನು ಹೊಂದಿರುವ ಗುರುಸಿದ್ದಪ್ಪನವರ ಶಿಷ್ಯರು ಇಂದು ಈ ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ. ವೃತ್ತಿ ಮತ್ತು ಪ್ರವೃತ್ತಿ ಗಳೆರಡರಲ್ಲೂ ಜೇಷ್ಟತೆ ಮತ್ತು ಶ್ರೇಷ್ಟತೆಯನ್ನು ಕಾಪಡಿಕೊಂಡು ಬಂದಿರುವ ಈ ಹಿರಿಯ ಗುರುಗಳು 80ರ ಈ ಇಳಿವಯಸ್ಸಿನಲ್ಲೂ ಚಳ್ಳಕೆರೆಯ ತ್ಯಾಗರಾಜ ನಗರ ಬಡಾವಣೆ ತಮ್ಮ ನಿವಾಸದಲ್ಲಿ ಈಗಲೂ ಬರುವ ಉತ್ಸಾಹಿಗಳಿಗೆ ಸಂಗೀತ ವಾದ್ಯವಾದನಗಳ ತರಬೇತಿ ನೀಡುತಿದ್ದಾರೆ.
ಲೇಖಕರು: ಯು.ಎಸ್.ವಿಷ್ಣುಮೂರ್ತಿರಾವ್ (ಸಾಹಿತಿಗಳು ಹಾಗು ಪತ್ರಕರ್ತರು)

No comments: