Sunday, November 2, 2008

ಬಯಲು ಸೀಮೆ ಗಾಂಧಿಗೆ ಗೌರವ ಡಾಕ್ಟರೇಟ್

ಬೆಳಗೆರೆ ಕೃಷ್ಣಶಾಸ್ತ್ರಿಯೆಂದೊಡನೆ ನಮ್ಮ ಸೀಮೆಯ ಜನಮನಗಳಲ್ಲಿ ಥಟ್ಟನೆ ಮೂಡುವ ಚಿತ್ರ; ನಿಷ್ಕಲ್ಮಷ ನಗುವಿನ ಶ್ವೇತಧಾರಿಯಾದ ತೊಂಬತ್ತರ ಯುವಕನ ಚಿತ್ರ ! ತಮ್ಮ ಈ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡಿಕೊಂಡು ಸಾಮಾಜಿಕ, ಆಧ್ಯಾತ್ಮಿಕ, ಜಾನಪದ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಶಾಸ್ತ್ರಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರು.


ಬೆಳಗೆರೆ ಕೃಷ್ಣಶಾಸ್ತ್ರಿಗಳು 22ರ ಮೇ 1918 ಬೆಳಗೆರೆಯಲ್ಲಿ ಜನಿಸಿದರು. ಇವರ ತಂದೆಯಾದಂತ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಯೂ, ಸಂಸ್ಕೃತ ವಿದ್ವಾಂಸರು, ವೇದ ವಿದ್ಯ ಪಾರಂಗತರಾಗಿದ್ದರು ಆ ವಿದ್ಯೆಯನ್ನು ಹೊಟ್ಟೆಪಾಡಿಗೆ ಬಳಿಸಿಕೊಳ್ಳಬಾರದು! ಎಂಬ ಮನೋಭಾವದ ವಿಶಿಷ್ಠ ವ್ಯಕ್ತಿ! ಇಂಥ ಸಂಧರ್ಭದಲ್ಲಿ, ಇವರ ತಾಯಿ ಶ್ರೀಮತಿ ಅನ್ನಪೂರ್ಣಮ್ಮನವರು ಮನೆತನದ ವಿದ್ಯೆ ಆಯುರ್ವೇದದಿಂದ ಮನೆವೈದ್ಯ ಮಾಡಿ ಇಡಿ ಮನೆಯ ನಿರ್ವಹಣೆಯನ್ನು ನಿಭಾಯಿಸಿದರು. ಕ್ಷೀರಸಾಗರ ಕಾವ್ಯನಾಮ ಖ್ಯಾತಿಯ ನಾಟಕಕಾರ ಹಾಗು ಗಣಿತ ಪ್ರಾಧ್ಯಾಪಕರಾದ ಸೀತಾರಾಮ ಶಾಸ್ತ್ರಿಗಳು ಇವರ ಹಿರಿಯ ಸಹೊದರರು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿಯೆಂದೆ ಖ್ಯಾತರಾದ ಬೆಳಗೆರೆ ಜಾನಕಮ್ಮ ಹಿರಿಯ ಸಹೊದರಿ ಹಾಗು ಮತ್ತೋರ್ವ ಕತೆಗಾರ್ತಿಯಾದಂತ ಬೆಳಗೆರೆ ಪಾರ್ವತಮ್ಮನವರು ಇವರ ಕಿರಿಯ ಸಹೊದರಿ. ಹೀಗೆ ಸಾಹಿತ್ಯಿಕ ಕುಟುಂಬದಿಂದ ಬಂದ ಕೃಷ್ಣಶಾಸ್ತ್ರಿಗಳು, ಸಹಜವಾಗಿಯೇ ಸಾಹಿತ್ಯದೆಡೆಗೆ ಆಕರ್ಷಿತರಾದರ ಕೃಷ್ಣಶಾಸ್ತ್ರಿಗಳು ಮುಂದೆ ಹಲವಾರು ಅಪರೂಪದ ಕೃತಿಗಳನ್ನು ಸಾರಸತ್ವಲೋಕಕ್ಕೆ ಅರ್ಪಸಿದರು.'ತುಂಬಿ' ಇವರ ಪ್ರಥಮ ಕವನ ಸಂಕಲನವೆನ್ನ ಬಹುದು. ಇವರು ಬರೆದ ನಾಟಕಗಳೆಂದರೆ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಆಕಸ್ಮಿಕ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ - ರುಸ್ತುಂ, ತೆನಾಲಿ ರಾಮ, ವಿಚಿತ್ರ ಸಾಮ್ರಾಜ್ಯಂ, ಅಲ್ಲಾವುದ್ದೀನ್, ಹಿಂಗೂ ಮಾಡಿ ನೋಡ್ರೀ. ಆಕಾಶದಗಲ ನಗುವಿನ ಅವಧೂತ, ಸಾಹಿಗಳ ಸ್ಮೃತಿ (ಬೇಂದ್ರ, ವಿ.ಸೀ.,ಡಿ.ವಿ.ಜಿ.,ದೇವುಡು ಅವರೊಂದಿಗಿನ ನೆನಪುಗಳು), ಮರೆಯಾಲಾದೀತ್ತೇ?, ಎಲೆ ಮರೆಯ ಆಲರು (ನಿರೂಪಣೆ: ನ.ರವಿಕುಮಾರ್) ಇವರ ಕೃತಿಗಳು . ಡಬ್ಲ್ಯ.ಸಿ.ಸ್ಯಾಂಡರ್ಸ್ರ 'ಇನ್ನರ್ ವಾಯ್ಸ್' ಕೃತಿಯನ್ನು 'ಅಂತರ್ ಧ್ವನಿ'ಯಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.


ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಸ್ಕೂಲ್ ಓದುತ್ತಿರುವಾಗ ಮಹಾತ್ಮ ಗಾಂಧಿಯವರ ಗಾಢಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ ಚಳುವಳಿಯಲ್ಲಿಯೂ ಭಾಗವಹಿಸಿದರು. 1926 ರಲ್ಲಿ ಗಾಂಧಿಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಾಂಧಿವಾದದ ಅಪ್ಪಟ ಅಭಿಮಾನಿಯಾದ ಇವರು ಸಂಕಲ್ಪದಂತೆ ಇಂದಿಗೂ ಖಾದಿಧಾರಿಯಾಗಿಯೆ ಉಳಿದಿದ್ದಾರೆ. ಆಚಾರ್ಯ ವಿನೋಬಾ ಅವರ ಭೂದಾನ ಚಳುವಳಿಯಲ್ಲಿಯೂ ಭಾಗವಹಿಸಿದ್ದಾರೆ.
ಮೈಸೂರುನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿದ ನಂತರ ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,ಕಳಸಾ ಮುಂತಾದ ಕಡೆಗಳಲ್ಲಿ ಉಪಾದ್ಯಾಯ ವೃತ್ತಿಯನ್ನು ನಿರ್ವಹಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಹೆಗ್ಗೆರೆ ಗ್ರಾಮಗಳಲ್ಲಿ ಸ್ಥಳಿಯ ಸಂಘನೆಯಿಂದ ಸರ್ಕಾರದ ನೆರವಿಲ್ಲದೆ ಶಾಲಾ ಕಟ್ಟಡ, ಆಸ್ಪತ್ರೆ, ಬಯಲು ರಂಗಮಂದಿರ, ಶಿವಾಲಯ, ಶಿಕ್ಷಕರ ವಸತಿ ಗೃಹ, ರಸ್ತೆಗಳ ನಿರ್ಮಾಣ ಇವೆಲ್ಲವೂ ಇವರ ಸಾಮಾಜಿಕ ಸೇವೆಗೆ ಸಾಕ್ಷಿ .


ಸಣ್ಣವಯಸಿನಲ್ಲಿಯೇ ಗರ್ಭಿಣಿ ಪತ್ನಿ ಹಾಗು ಮಗುನನ್ನು ಕಳೆದುಕೊಂಡ ಇವರು ಸಹಜವಾಗಿಯೆ ಆಧ್ಯಾತ್ಮದೆಡೆಗೆ ಆಕರ್ಷಿತರಾದರು. ಎರಡನೇ ಮದುವೆಯಾಗಲು ಇವರ ಸಹೊದರಿಯಾದ ಪಾರ್ವತಮ್ಮನವರ ಒತ್ತಡ ತಾಳಲಾರೆದೆ ತಮ್ಮ ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರಂತೆ! ತಿರುವಣ್ಣಾಮಲೈನ ಶ್ರೀ ರಮಣ ಮಹರ್ಷಿಗಳ ದಿವ್ಯ ಸನ್ನಿಧಿಯಲ್ಲಿ ಬಹುದಿನದ ಕ್ಲೇಷ ಕಳೆದು ಒಂದು ಬಗೆಯ ಅಲೌಕಿಕ ಅನುಭಾವಕ್ಕೆ ಒಳಗಾದರು. ಆಶ್ರಮದಲ್ಲೆ ಕೆಲ ಕಾಲವಿದ್ದು ಆಧ್ಯಾತ್ಮಿಕ ಸಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಆನಂದ ಆಶ್ರಮದ ಶ್ರೀ ರಾಮದಾಸರು, ಹೃಷಿಕೇಶದ ಸ್ವಾಮಿ ಶಿವಾನಂದರು, ಬಾಗೂರಿನ ಶ್ರೀ ಶರಣಮ್ಮ , ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (ತಿರುಕ), ಶ್ರೀ ಜಿಡ್ಡು ಕೃಷ್ಣಮೂರ್ತಿ ಮೊದಲಾದ ಸತ್ಪರುಷರೊಂದಿಗೆ ಒಡನಾಟವಿಟ್ಟು ಕೊಂಡಿದ್ದರು. ಸಿದ್ಧಪುರುಷರು, ಅವಧೂತರು ಆದಂತ ಶ್ರೀ ಮುಕೂಂದೂರು ಸ್ವಾಮಿಗಳೊಂದಿಗೆ ಇದ್ದ ಇವರ ಒಡನಾಟಕ್ಕೆ ಅಕ್ಷರ ರೂಪು ಕೊಟ್ಟು ಯೆಗ್ದಾಗೆಲ್ಲಾ ಐತೆ ಕೃತಿರೂಪದಲ್ಲಿ ಹೊರ ತಂದಿರುತ್ತಾರೆ. ಈ ಕೃತಿಯು ಹಿಂದಿ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಪ್ರಸ್ತುತ ಸಂಸ್ಕೃತ, ಮಲೆಯಾಳಿ, ಬಂಗಾಳಿ, ತಮಿಳು, ಒರಿಯಾ, ಭಾಷೆಗಳಲ್ಲಿ ಅನುವಾದಕ್ಕೆ ಅಣಿಯಾಗುತ್ತಿದೆ
. ನಾಡಿನ ಜಾನಪದ ಕ್ಷೇತ್ರಕ್ಕೆ ಇವರ ಸೇವ ಅಪಾರ. ಜಾನಪದ ಕಂಪ್ಯೂಟರ್, ನಾಡೋಜಾ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತ ' ಜನಪದ ಸಿರಿ' ಸಿರಿಯಜ್ಜಿಯನ್ನು ಪರಿಚಯಿಸಿದ ಹಿರಿಮೆ ಇವರದು. ಟಿಮೇಟಿ ಕ್ರಿಸ್ಟೋಫರ್ , ಕೆ.ಹಿಲ್. ಫೀಟರ್ ಜೆ.ಕ್ಲಾವುಸ್, ಆಂಡ್ರೂಸ್ ಮುಂತಾದವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಶಾಸ್ತ್ರಿಗಳು ನೆರವಾಗಿದ್ದಾರೆ. ದೇಶಿಯ ಸಂಶೋಧಕರಾದ ಸನ್ಮಾನ್ಯ ಡಾ.ತಿ.ನಂ.ಶಂಕರನಾರಯಣ, ಢಾ.ಆರ್.ಶೇಷ ಶಾಸ್ತ್ರಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಜಿ.ಈಶ್ವರಪ್ಪ ಮೊದಲಾದ ಜಾನಪದ ಸಂಶೋಧನೆಗೆ ಇವರಿದ್ದ ಕುಟೀರವೇ ಸ್ಪೂರ್ತಿಯ ನೆಲೆಯಾಗಿದೆ. ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಅವರನ್ನು ಬೆಳಗೆರೆ ನಾರಯಣಪುರದಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿದ್ದಾರೆ.ಹಳ್ಳಿಚಿತ್ರ ನಾಟಕಕ್ಕೆ - ಶ್ರೇಷ್ಟ ನಾಟಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಟಕ ಪುರಸ್ಕಾರ. ಮೈಸೂರು ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1970), ಕೇಂದ್ರ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1971), ಚಿತ್ರದುರ್ಗದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸೇವಾರತ್ನ ಪ್ರಶಸ್ತಿ. ಚಿಕ್ಕಮಗಳೂರಿನ ಅಳಾಸಿಂಗಚಾರ್ ಪ್ರಶಸ್ತಿ. 1996ರಲ್ಲಿ ನಡೆದ ಚಿತ್ರದುರ್ಗ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಕ್ಷತೆಯನ್ನೂ ವಹಿಸಿದ್ದಾರೆ.ಚಿತ್ರದುರ್ಗದ ಅಭಿಮಾನಿಗಳು ಚಿನ್ಮಯಿ ಎಂಬ ಸಂಭಾವನ ಗ್ರಂಥವನ್ನು ಅರ್ಪಸಿದ್ದಾರೆ. ಅರ್ಪಣೆ - ಚಿಕ್ಕಮಗಳೂರಿನ ಅಭಿಮಾನಿಗಳು ಅರ್ಪಸಿದ ಸಂಭಾವಾನ ಗ್ರಂಥ.
ಬಬಬಬಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳವರ ಆಶಯದಂತೆ ಹಾಗು ಅಣ್ಣ ಸೀತಾರಾಮಶಾಸ್ತ್ರಿಗಳವರ ಆರ್ಥಿಕ ಸಹಕಾರದಿಂದ 1967ರಲ್ಲಿ , ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತ ಮನೆಯಲ್ಲಿಯೇ ಶ್ರೀ ಶಾರದ ಮಂದಿರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಗ್ರಾಮೀಣ ಅಲಕ್ಷಿತ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರದ ಯಾವುದೇ ನೆರವಿಲ್ಲದೇ ಆರಂಭಗೊಂಡ ಈ ಸಂಸ್ಥೆ ಇಂದಿಗೂ 750 ವಿದ್ಯಾರ್ಥಗಳಿಗೆ ಯಾವುದೆ ರೀತಿಯ ಸೇವಾ ಶುಲ್ಕವಿಲ್ಲದೆ ಉಚಿತ ವಿದ್ಯೆ,ಉಚಿತ ಊಟ , ಉಚಿತ ವಸತಿ ಕಲ್ಪಸಿಕೊಡಲಾಗುತ್ತಿದೆ. ಇಂದು ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿರುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಏಕವ್ಯಕ್ತಿ ಸಂಸ್ಥೆಯಾಗಿ ಯಾವುಧೇ ರೀತಿಯ ಫಲಾಪೇಕ್ಷೆಯಿಲ್ಲದೆ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಎರಡು ಬಾರಿ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಬತ್ತದ ಚೈತನ್ಯದ ಚಿಲುಮೆಯ ಈ ಶಾಸ್ತ್ರಿಗಳು! ಆದರ್ಶಯುತವಾಗಿ ಬದುಕಿದವರು ಬಹಳಷ್ಟು ಮಂದಿ ಬದುಕೇ ಆದರ್ಶವಾಗಿಸಿಕೊಂಡವರು ವಿರಳ ಅಂತಹರ ಸಾಲಿಗೆ ಈ ಬಿಳಿಯ ಬಟ್ಟೆಯ ಜಂಗಮ ಸೇರುತ್ತಾರೆ. ಇಂತಹ ಶಾಸ್ತ್ರಿಗಳಿಗೆ ಕೊನೆಗೂ ಡಾಕ್ಟರೇಟ್ ಗೌರವ ದಕ್ಕಿದೆ. ಪ್ರಶಸ್ತಿ-ಪುರಸ್ಕಾರಗಳೇನಿದ್ದರು ನಮ್ಮ ಮುಚ್ಚಟೆಯೇ ಹೊರತು ಈ ನಿರ್ಮೋಹಿ ಸಂತನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಈ ಮಹಾನ್ ಚೇತನಕ್ಕೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲಿ ,ಇದೇ ಅವರೆಲ್ಲ ಅಭಿಮಾನಿಗಳ ಹಾರೈಕೆ.

No comments: