
Wednesday, January 7, 2009
ಸಾಹಿತ್ಯ ಜಾತ್ರೆ
ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದ್ದು, ಬರದ ನಾಡಲ್ಲಿ ಸಾಹಿತ್ಯ ಜಾತ್ರೆಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಒಂದೆಡೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾಹಿತ್ಯಪೂರಕ ಚಟುವಟಿಕೆಗಳು ತುಸು ಬಿರುಸಾಗಿವೆ. ಇದೆಲ್ಲದರ ನಡುವೆ ಸಮ್ಮೇಳನದ ದೇಣಿಗೆ ಅಭಿಮಾನದ ಸ್ವರೂಪ ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ.
ಒಂದೆರಡು ತಿಂಗಳು ಹಿಂದಕ್ಕೆ ಹೋಗಿ ಆಲೋಚಿಸಿದರೆ ಅಂದಿನ ಪರಿಸ್ಥಿತಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸಗಳು ಗೋಚರಿಸುತ್ತದೆ. ಸಮ್ಮೇಳನದ ದಿನಾಂಕ ಘೋಷಣೆಯಾದ ಮೇಲೆ ಮೂಲಸೌಕರ್ಯಗಳಿಲ್ಲ, ಮಲಗೋಕೆ ಜಾಗಗಳಿಲ್ಲ, ಓಡಾಡಲು ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಇದೆಲ್ಲ ಹೊರತಾಗಿ ದೇಣಿಗೆ ಯಾರು ಕೊಡ್ತಾರೆ? ಎಂಬಂತೆ ಇತ್ಯಾದಿ ಅಪಸ್ವರದ ರಾಗಗಳು ಕೇಳಿಬಂದವು. ಸುಮ್ಮನೇ ಕುಳಿತು ಆಲೋಚಿಸುವವರಿಗೆ ಇದೆಲ್ಲ ನಿಜವೆಂಬ ಭಾವನೆಗಳು ಮೂಡಿರಬಹುದು. ಆದರೆ ಸಾಹಿತ್ಯ ಜಾತ್ರೆಗೆ ಇಂತದ್ದೊಂದು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಯಾರೂ ಊಹಿಸದಷ್ಟು ರೀತಿಯಲ್ಲಿ ಚಟುವಟಿಕೆಗಳು ನೆಡಯುತ್ತಿರುವುದು ಅಚ್ಚರಿ ತರಿಸಿದೆ.
ಸರ್ಕಾರಿ ನೌಕರರು ಉದ್ಯಮಿಗಳು, ವರ್ತಕರು, ಸಂಘಸಂಸ್ಥೆಗಳು, ಉದಾರವಾಗಿ ದೇಣಿಗೆ ನೀಡುವ ತೀರ್ಮಾನ ಕೈಗೊಂಡಿರುವುದು ಬಯಲು ಸೀಮೆ ಎಂಬ 'ಕಹಿ' ಬರಹ ತುಸು ಮರೆಮಾಚಿದಂತಾಗಿದೆ. ಕೇವಲ ಹದಿನೈದು ದಿನದ ಅಂತರದಲ್ಲಿ ಅರ್ಧ ಕೋಟಿಯಷ್ಟು ಹಣ ದೇಣಿಗೆ ರೂಪದಲ್ಲಿ ಸಮ್ಮೇಳನ ಸಮಿತಿಗೆ ಜಮಾ ಆಗಿರುವುದೇ ಇದಕ್ಕೆ ಸಾಕ್ಷಿ. ಇದಲ್ಲದೇ ಆಹಾರ ಪದಾರ್ಥಗಳು ಕೂಡ ಸಂಗ್ರಹವಾಗುತ್ತಿದೆ
ಚಿತ್ತಾರದುರ್ಗ ಸಂಭ್ರಮದ ಫೋಟೋ ಗ್ಯಾಲರಿ
Thursday, November 27, 2008
ಜನಪದ ಕಥಾಕಣಜ ಈರಬಡಪ್ಪ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಈರಬಡಪ್ಪನವರ ಹುಟ್ಟೂರು. ಕುರುಬ ಸಮುದಾಯಕ್ಕೆ ಸೇರಿದ ಈರಬಡಪ್ಪ ತನ್ನ ಹಳ್ಳಿಯ ಎಲ್ಲಾ ಜೀವಸತ್ವದೊಂದಿಗೆ ಬೆಳೆದು ಬಂದು ಅತ್ಯುತ್ತಮ ಕಥೆಗಾರನಾಗಿ ಈ ಪರಿಸರದಲ್ಲಿ ಜನಜನಿತ ವ್ಯಕ್ತಿಯಾಗಿದ್ದಾರೆ. ಯಾವ ಹೊತ್ತಿನಲ್ಲೇ ಆಗಲಿ ಊರಿನ ಜನ ಬಡಜ್ಜ ಕಥೆ ಹೇಳು ಅಂದರೆ ಸಾಕು ಬೇಸರಿಸಿಕೊಳ್ಳದೇ ಸರಾಗವಾಗಿ ಕಥೆ ಹೇಳಲಿಕ್ಕೆ ಶುರು ಮಾಡಿಬಿಡುತ್ತಾರೆ. ಕೇಳುವವರೇ ಕೊನೆಗೆ ಸುಸ್ತಾಗಬೇಕು. ಅಷ್ಟೊಂದು ಕಥೆಗಳು ಇವರ ಕಣಜದೊಳಗೆ ತುಂಬಿಕೊಂಡಿವೆ. ಇವರ ಕಥೆಗಳು ವಸ್ತುವೈವಿದ್ಯದಿಂದ ಕೂಡಿದ್ದು, ಅದ್ಭುತ ರಮ್ಯಲೋಕವನ್ನು ತೆರೆದಿಡುತ್ತವೆ.
ಈರಬಡಪ್ಪನವರ ಕಥೆಗಳ ಬಗ್ಗೆ ನಾಡಿನ ಗಣ್ಯವಿದ್ವಾಂಸರು ಮೆಚ್ಚುಗೆಯ ನುಡಿಬಾಗಿನ ಕೊಟ್ಟಿದ್ದಾರೆ. ಡಾ. ಜೀ.ಶಂ. ಪರಮಶಿವಯ್ಯನವರು ಈರಬಡಪ್ಪನವರ ಕಥೆಗಳನ್ನು ಆಸ್ವಾಧಿಸಿ ಹೇಳಿದ್ದು ಹೀಗೆ, "ಈರಬಡಪ್ಪನ ಕಥೆಗಳಲ್ಲಿ ಬರುವ ವಿವರಗಳು ಕತೆಗಾರರ ಲೋಕಾನುಭವವನ್ನು ನಿರೂಪಣಾ ಸಾಮರ್ಥ್ಯವನ್ನು ಕಲಾತ್ಮಕ ಪ್ರತಿಭೆಯನ್ನು ಮೆರೆಯುತ್ತವೆ. ಪ್ರತಿಯೊಂದು ಸಂಧರ್ಭದಲ್ಲಿ ಸಮುಚಿತವಾದ ಸಂಭಾಷಣೆಯಿಂದ ಕಥೆಗೆ ಸ್ವಾರಸ್ಯವನ್ನು ತುಂಬಲಾಗುತ್ತದೆ. ಈತನ ಕಥೆಗಳಲ್ಲಿ ಯಥೇಚ್ಛವಾಗಿ ಕಂಡು ಬರುವ ವರ್ಣನೆಗಳಲ್ಲಿ ಒಳ್ಳೆಯ ಕವಿ ಪ್ರತಿಭೆ ಹಾಗೂ ಸೊಬಗ ಶೈಲಿಯನ್ನು ಕಂಡುಕೊಳ್ಳಬಹುದು." ಡಾ.ಹಿ.ಶಿ. ರಾಮಚಂದ್ರೇಗೌಡರು ಈರಬಡಪ್ಪನವರು ಹೇಳುವ ಕೆಲವು ನಿರ್ಧಿಷ್ಠ ಕತೆಗಳನ್ನು ಕುರಿತಂತೆ ಹೀಗೆ ಅಭಿಪ್ರಾಯಪಡುತ್ತಾರೆ. "ಕತೆಗಾರ ಈರಬಡಪ್ಪ ಹೇಳಿರುವ 'ಬಡಕುದುರೆ ಬಡಜ್ಜ' ಕತೆಯಲ್ಲಿ ಬಡಕುದುರೆ ಅವಸಾನ ಕರುಣಾಜನಕವಾಗಿದ್ದು, ಸಾಹಿತ್ಯಕ ಕಥೆಯೊಂದರ ಅಂತ್ಯದಂತೆ ಕಂಡುಬರುತ್ತದೆ. 'ಸಾವಿತ್ರಿಸ್ವಪ್ನ' ಕತೆ ಒಂದು ವಿಶಿಷ್ಟ ವಿನ್ಯಾಸ ಮತ್ತು ಭಾಷೆಯ ವಿಶೇಷ ತೊಡಗುವಿಕೆಯಲ್ಲಿ ಸೃಷ್ಠಿಯಾಗಿದೆ. ಕನ್ನಡದಲ್ಲಿ ಇದುವರೆಗೆ ದೊರೆತಿರುವ ಇತರ ಯಾವುದೇ ಪಾಠಬೇದಕ್ಕಿಂತ ಉತ್ತಮವೆನಿಸಿದೆ."
ದೇಸಿ ಕವಿ ಎಸ್.ಜಿ. ಸಿದ್ಧರಾಮಯ್ಯನವರು ಈರಬಡಪ್ಪನವರು ಹೇಳುವ ಕಥೆಗಳು ಹಾಗೂ ಕಥೆಗಾರನ ಆತ್ಮಕಥನವನ್ನು ಕುರಿತಂತೆ ಹೇಳಿರುವ ನುಡಿಗಳವು. "ಜನಪದ ಕಥಾಕಣಜವೆಂದರೆ, ಅದು ಬಹುಮುಖೀ ನೆಲೆಯೊಳಗೆ ಈ ನೆಲದ ಜೀವನ ಪರಂಪರೆಗಳನ್ನು ದ್ರವ್ಯವಾಗಿಸಿಕೊಂಡಿರುವ ಮೌಖಿಕ ಸಂಪದದ ನೆಲೆವೀಡು ನಮ್ಮ ಜನಪದರ ಎದೆಯಂಗಳ. ಈರಬಡಪ್ಪನವರ ಕಥೆಗಳನ್ನು ಕೇಳುತ್ತಾ ಹೋದರೆ ಹಲವು ವಿಸ್ಮಯಗಳು ತೆರೆದುಕೊಳ್ಳುತ್ತವೆ.
1986ರಲ್ಲಿ ಈರಬಡಪ್ಪನವರ ಕೆಲವು ಕತೆಗಳನ್ನು 'ಕಮರಹಳ್ಳಿಯ ಕಥೆಗಳು' ಎಂಬ ಶೀರ್ಷಿಕೆಯಲ್ಲಿ ಇದೇ ಲೇಖಕನಿಂದ ಸಂಪಾದನೆಗೊಂಡು ಕೃತಿ ಪ್ರಕಟವಾಗಿರುತ್ತದೆ. ಕೃತಿಯೊಳಗಿನ ಕತೆಗಳ ಅಂತಃಸತ್ವವನ್ನು ಮನಗಂಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದರಿ ಕೃತಿಗೆ 1988ರಲ್ಲಿ ಪುಸ್ತಕ ಬಹುಮಾನವನ್ನು ನೀಡಿತು. ನಂತರ 2001ರಲ್ಲಿ ಕಥಾಕಣಜ ಈರಬಡಪ್ಪನವರಿಗೂ ಪ್ರಶಸ್ತಿ ನೀಡಿ ಗೌರವಿಸಿತು. 2007ರಲ್ಲಿ ಕಥೆಗಾರರ ಮನದಾಳದ ಕನಸಗಳು ಹೃದಯದ ಭಾವಗಳ ಆತ್ಮಕಥನ ಈ ಲೇಖಕನಿಂದ ರೂಪುಗೊಂಡು ಕನ್ನಡ ಪುಸ್ತಕ ಪ್ರಾಧೀಕಾರದಿಂದ ಕೃತಿರೂಪದಲ್ಲಿ ಪ್ರಕಟಗೊಂಡಿತು.
ಈರಬಡಪ್ಪನವರ ಪ್ರತಿಭಾ ಸಂಪತ್ತನ್ನು ಗುರುತಿಸುತ್ತಿರುವ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಈಚೆಗೆ ಮೈಸೂರಿನ ರಂಗಾಯಣ ಸಂಸ್ಥೆಗೆ ರಂಗಾಸಕ್ತರಿಗೆ ಕಥೆ ಹೇಳಿಸಿ ಗೌರವಿಸಿ ಸನ್ಮಾನ ಮಾಡಿದ್ದು ಒಂದು ವಿಶೇಷವಾಗಿತ್ತು. ಇದೀಗ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಯುತರಿಗೆ ಪ್ರಶಸ್ತಿ ಘೋಷಿಸಿರುವುದು ಈರಬಡಪ್ಪನವರ ಕಥಾ ಪ್ರತಿಭೆಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಇಂಥ ಅಪರೂಪದ ಪ್ರತಿಭೆಗಳ ಬಗ್ಗೆ ಸಾಹಿತಿ ಕಾ.ತ.ಚಿಕ್ಕಣ್ಣ ಜನಪದ ವಿದ್ವಾಂಸರಾದ ಡಾ.ಕಾಳೇಗೌಡ ನಾಗವಾರ, ಡಾ ಕೃಷ್ಣಮೂರ್ತಿ ಹನೂರು, ಡಾ ಮೀರಾಸಾಬಿಹಳ್ಳಿ ಶಿವಣ್ಣ ಇವರ ವಿಶೇಷ ಪ್ರೋತ್ಸಾಹ ಮತ್ತು ಅಗ್ಗಳಿಕೆಯನ್ನು ಈರಬಡಪ್ಪ ಪಡೆದುಕೊಂಡಿರುವುದು ಜನಪದ ಕಥಾ ಜಗತ್ತು ಜೀವಂತವಾಗಿರಲು ಸಹಕಾರಿಯಾದೀತು.
- ಉಪ್ಪಾರಹಟ್ಟಿ ಚಿತ್ತಯ್ಯ, ಚಳ್ಳಕೆರೆ.
+91 94485 67118
Sunday, November 2, 2008
ಚಿತ್ರದುರ್ಗ ಜಿಲ್ಲೆಯ ಕೈಗಾರಿಕಾ ಚಿತ್ರ
ಚಿತ್ರದುರ್ಗ ಜಿಲ್ಲೆಯು ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಪ್ರದೇಶವಾದರೂ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಸಾಂಸ್ಕೃತಿಕ ಬೀಡಾಗಿದೆ. ಇತಿಹಾಸ ಪ್ರಸಿದ್ಧ ಕಲ್ಲಿನ ಕೋಟೆ, ಮುರುಘರಾಜೇಂದ್ರ ಬೃಹನ್ಮಠ, ವೀರವನಿತೆ ಒನಕೆ ಓಬವ್ವನ ಕಿಂಡಿ ಇತ್ಯಾದಿಗಳನ್ನೊಳಗೊಂಡ ಮೆದಕೇರಿನಾಯಕರಾಳಿದ ಐತಿಹಾಸಿಕ ನಗರ, ಅಲ್ಲದೇ ಜಿಲ್ಲೆಯಲ್ಲಿ ಹಾಲುರಾಮೇಶ್ವರ, ರಂಗನಾಥಸ್ವಾಮಿ ದೇವಾಲಯ, ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳು ಇತ್ಯಾದಿಗಳಿವೆ.
ಕೈಗಾರಿಕಾ ಮತ್ತು ಕೃಷಿ ದೃಷ್ಟಿಯಿಂದ ನೋಡುವುದಾದರೆ ಈ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ರೇಷ್ಮೆ ಸೀರೆ ನೇಯ್ಗೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಪ್ರಕೃತಿದತ್ತ ಸುಣ್ಣದಕಲ್ಲು, ಕಬ್ಬಿಣದ ಅದಿರು, ಮ್ಯಾಂಗನೀಸ್ ಇತ್ಯಾದಿ ವಿಫುಲ ಖನಿಜ ಸಂಪತ್ತುಗಳಲ್ಲದೇ, ಕೃಷಿ ಉತ್ಪನ್ನಗಳಾದ ಮೆಕ್ಕೆಜೋಳ, ರಾಗಿ, ಈರುಳ್ಳಿ, ತೆಂಗು, ಶೇಂಗಾ ಬೆಳೆಗಳಲ್ಲದೆ ಹಣ್ಣುಹಂಪಲು, ಸೂರ್ಯಕಾಂತಿ, ಅಡಿಕೆ, ದಾಳಿಂಬೆ, ಅಂಜೂರ, ಮುಂತಾದ ತೋಟಗಾರಿಕೆ ಬೆಳೆಗಳು ಸಮೃದ್ದಿಯಾಗಿವೆ. ಈ ಸಂಪನ್ಮೂಲಗಳನ್ನಾಧರಿಸಿದ ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇವು ಸ್ಥಾಪಿಸಲ್ಪಟ್ಟಿವೆ. ಜಿಲ್ಲೆಯಲ್ಲಿ ಕುಶಲಕರ್ಮಿಗಳು ಮಹಿಳಾ ಸ್ವಸಹಾಯ ಸಂಘದವರು ಗುಡಿ ಕೈಗಾರಿಕೆ ಮತ್ತು ಗುಂಪು ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಉತ್ಪಾದನೆಗೆಂದು ಗಾಳಿಯಂತ್ರಗಳು (wind mills)ಸ್ಥಾಪಿತವಾಗಿವೆ. ಆದಾಗ್ಯೂ ಕೈಗಾರಿಕಾಭಿವೃದ್ಧಿ ಮಂದಪ್ರಗತಿಯಲ್ಲಿದೆಯೆಂದು ಹೇಳಲೇಬೇಕಾಗಿದೆ.
ಜಿಲ್ಲೆಯ ಭೌಗೋಳಿಕ ಲಕ್ಷಣಗಳು
1998ರಲ್ಲಿ ಹೊಸ ಜಿಲ್ಲೆಗಳ ಉದಯದ ನಂತರ ಹೊಸ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಎಂದು 6 ತಾಲ್ಲೂಕುಗಳನ್ನು ಹೊಂದಿದೆ. ಜಿಲ್ಲೆಯು ರಾಜ್ಯದ ಮಧ್ಯಭಾಗದಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಒಟ್ಟು ವಿಸ್ತೀರ್ಣ 7,70,700 ಹೆಕ್ಟೇರ್ ಗಳಿದ್ದು, ಬಹುಭಾಗ ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಮತ್ತು ಕಪ್ಪು ಮಣ್ಣಿನಿಂದ ಕೂಡಿದೆ. 4,08,168 ಹೆಕ್ಟೇರ್ ಗಳ ಸಾಗುವಳಿ, 77,255 ಹೆಕ್ಟೇರುಗಳ ನೀರಾವರಿ ಕ್ಷೇತ್ರ ಹಾಗೂ 73,719 ಹೆಕ್ಟೇರುಗಳಲ್ಲಿ ಅರಣ್ಯ ಭೂಮಿಯಿದೆ.
ಜಿಲ್ಲೆಯ ಬಹುಭಾಗ ಬರಡಾಗಿದ್ದು ಹವಾಮಾನವು 35 ಡಿ.ಸೆ.ನಿಂದ 42 ಡಿ.ಸೆ.ನವರೆಗೆ ಉಷ್ಣಾಂಶ ಹೊಂದಿರುತ್ತದೆ. ಜಿಲ್ಲೆಯ ವಾರ್ಷಿಕ ಮಳೆ ಪ್ರಮಾಣವು 450 ಮಿ.ಮೀ. ನಿಂದ 468 ಮಿ.ಮೀ ಜಿಲ್ಲೆಯಲ್ಲಿ ಸರ್ವ ಋತುಮಾನದ ಏಕೈಕ ನದಿ ವೇದಾವತಿ ಹರಿಯುತ್ತಿದ್ದು, ನೀರಾವರಿಯಿಂದ ವಂಚಿತರಾಗಿ, ರೈತರು ಕೇವಲ ಮಳೆ ನೀರನ್ನು ಆಶ್ರಯಿಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಕೃಷಿಕರು ಹಾಗೂ ತೋಟಗಾರರು ನಿರತರಾಗಿದ್ದು, ಇದರಿಂದ ಎಣ್ಣೆ ಮಿಲ್ ಗಳು ಸಾಕಷ್ಟು ಸಂಖ್ಯೆಯಲ್ಲಿವೆ. ತೆಂಗಿನ ಬೆಳೆಯನ್ನು ಅವಲಂಭಿಸಿ ತೆಂಗಿನ ನಾರಿನ ಹುರಿ, ಹಗ್ಗ ಉತ್ಪಾದಿಸುವ ಕೈಗಾರಿಕೆಗಳಿವೆ. ವಿಫುಲ ನೈಸರ್ಗಿಕ ಖನಿಜಗಳಿಂದ ಗಣಿಗಾರಿಕೆ ಚಟುವಟಿಕೆ ಕೇಂದ್ರೀಕೃತವಾಗಿದೆ. ಸುಣ್ಣದ ಕಲ್ಲುಗಳನ್ನು ಅವಲಂಭಿಸಿ ಸಿಮೆಂಟ್ ಕಾರ್ಖಾನೆಗಳಿವೆ.
ಸಂಪನ್ಮೂಲಗಳು:
ಜಿಲ್ಲೆಯ ಜನಸಂಖ್ಯೆಯ ಬಹುಬಾಗ ಕೃಷಿಯನ್ನು ಅವಲಂಬಿಸಿದೆ. ಭೂಮಿಯು ಫಲವತ್ತಾದ್ದರಿಂದ ಬೃಹತ್ ನೀರಾವರಿ ಯೋಜನೆ ಜಿಲ್ಲೆಯಲ್ಲಿ ಲಭ್ಯವಿಲ್ಲದಾಗ್ಯೂ ಮಳೆ ನೀರನ್ನು ಅವಲಂಬಿಸಿ ಉತ್ತಮ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸದರಿ ಪ್ರಮುಖ ಬೆಳೆಗಳ ಸರಾಸರಿ ವಾರ್ಷಿಕ ಇಳುವರಿ ಕೆಳಗಿನಂತಿದೆ.
ಬೆಳೆಗಳು ಇಳುವರಿ ( ಮೆ.ಟನ್ ಗಳಲ್ಲಿ )
ಮೆಕ್ಕೆಜೋಳ 115550
ಜೋಳ 38700
ಈರುಳ್ಳಿ 435125
ತೊಗರಿ 18250
ಕಡಲೆ 14150
ರಾಗಿ 61750
ಸೂರ್ಯಕಾಂತಿ 28350
ಶೇಂಗಾ 195000
ಅಲಸಂದಿ 15250
ತೋಟಗಾರಿಕೆ ಬೆಳೆಗಳನ್ನು ಸಮೃದ್ದಿಯಾಗಿ ಬೆಳೆಯಲಾಗುತ್ತಿದ್ದು ಅವುಗಳ ಸರಾಸರಿ ವಾರ್ಷಿಕ ಇಳುವರಿ ಈ ಕೆಳಗಿನಂತಿದೆ.
ತೆಂಗು 6095 ಲಕ್ಷ (ಸಂಖ್ಯೆ)
ಮಾವು 13516 ಮೆ. ಟನ್
ಅಂಜೂರ 8600 ಮೆ. ಟನ್
ಅಡಿಕೆ 46615 ಮೆ. ಟನ್
ದಾಳಿಂಬೆ 9825 ಮೆ. ಟನ್
ಪಪ್ಪಾಯಿ 25700 ಮೆ. ಟನ್
ಅಂತೆಯೇ ಹಿರಿಯೂರು ತಾಲ್ಲೂಕು ಹುಚ್ಚವ್ವನಹಳ್ಳಿಯಲ್ಲಿ ಆಹಾರ ಕೃಷಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾಗುತ್ತಿದೆ.
ಜಿಲ್ಲೆಯಲ್ಲಿ ಹಸು, ಎಮ್ಮೆ, ಕುರಿ, ಆಡು, ಕೋಳಿ, ಇತ್ಯಾದಿ ಜಾನುವಾರು ಮತ್ತು ಪಕ್ಷಿಗಳ ಸಂಖ್ಯೆ ಸಮೃದ್ದಿಯಾಗಿದೆ. ಇದರಿಂದ ಉಣ್ಣೆ ನೇಯ್ಗೆ ಕುಶಲಕರ್ಮಿಗಳು ಕಂಬಳಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಹಾಲು ಒಕ್ಕೂಟದಡಿಯಲ್ಲಿ ಜಿಲ್ಲೆಯಲ್ಲಿ ದಿನಂಪ್ರತಿ 3 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಶಿವಮೊಗ್ಗ ಹಾಲು ಒಕ್ಕೂಟದಿಂದ ಮಾರಾಟ ವ್ಯವಸ್ಥೆಯಾಗುತ್ತಿದೆ. ಬಹುಸಂಖ್ಯೆಯಲ್ಲಿ ಕೋಳಿ ಉದ್ಯಮ ಮತ್ತು ಕೋಳಿ ಆಹಾರ ತಯಾರಿಕಾ ಘಟಕಗಳಿವೆ.
ಜಿಲ್ಲೆಯಲ್ಲಿ 4066 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದ್ದು ವಾರ್ಷಿಕ ಬೆಳೆಯಲಾಗುತ್ತಿದ್ದು ವಾರ್ಷಿಕ 6000 ಮೆ. ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ರೇಷ್ಮೆ ನೂಲು ಬಿಚ್ಚುವ ಘಟಕಗಳು, ರೇಷ್ಮೆ ಸೀರೆ ನೇಯ್ಗೆ ಘಟಕಗಳು ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿವೆ.
ಜಿಲ್ಲೆಯಲ್ಲಿ ಹೇರಳವಾದ ಮಾನವ ಸಂಪನ್ಮೂಲ ಲಭ್ಯವಿದೆ. ಇಂಜಿನಿಯರಿಂಗ್, ದಂತ ಮತ್ತು ವೈದ್ಯಕೀಯ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ, ವೃತ್ತಿ ಶಿಕ್ಷಣ ಸಂಸ್ಥೆ, ಪದವಿ ಕಾಲೇಜುಗಳು, ಪಾಲಿಟೆಕ್ನಿಕ್ ಸಂಸ್ಥೆಗಳು ಇತ್ಯಾದಿಗಳಿಂದ ಉತ್ತಮ ಶಿಕ್ಷಣ ಪಡೆದ ಪದವೀಧರರು, ತರಬೇತಿ ಪಡೆದವರು ಹೆಚ್ಚಾಗಿ ಹೊರಬರುತ್ತಿದ್ದಾರೆ. ಜೊತೆಗೆ ರುಡ್ ಸೆಟ್ (RUDSET) ಕುಶಲಕರ್ಮಿ ತರಬೇತಿ ಕೇಂದ್ರ, ನಿರ್ಮಿತಿ ಕೇಂದ್ರ ಇತ್ಯಾದಿಗಳಿಂದ ನುರಿತ ಕೆಲಸಗಾರರು ಲಭ್ಯರಿದ್ದಾರೆ.
ಮೂಲ ಸೌಕರ್ಯಗಳು:
ಜಿಲ್ಲೆಯಲ್ಲಿ 887 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 486 ಕಿ.ಮೀ. ರಾಜ್ಯ ಹೆದ್ದಾರಿ ಇದೆ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಂ 4 ಹಿರಿಯೂರು - ಚಿತ್ರದುರ್ಗ ಮಾರ್ಗವಾಗಿ ಮತ್ತು ರಾ.ಹೆ. 13 ಚಿತ್ರದುರ್ಗ- ಹೊಳಲ್ಕೆರೆ ಮಾರ್ಗವಾಗಿ ಒಟ್ಟು 166 ಕಿ.ಮೀ. ಉದ್ದವಿದೆ. ಚಿತ್ರದುರ್ಗದಿಂದ ಚಿಕ್ಕಜಾಜೂರುವರೆಗೆ ಮುಖ್ಯ ರೈಲುಮಾರ್ಗಕ್ಕೆ ಸಂಪರ್ಕದ ಮತ್ತು ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗವಾಗಿ ರಾಯದುರ್ಗಕ್ಕೆ ಸೇರುವ ಒಟ್ಟು 154 ಕಿ.ಮೀ. ಉದ್ದದ ಬ್ರಾಡ್ ಗೇಜ್ ರೈಲುಮಾರ್ಗವಿದೆ.
ಜಿಲ್ಲೆಯಲ್ಲಿ ಒಟ್ಟು 306 ಅಂಚೆಕಚೇರಿಗಳು, 45 ತಂತಿ ಕಚೇರಿಗಳು, 84 ದೂರವಾಣಿ ವಿನಿಮಯ ಕೇಂದ್ರಗಳಿದ್ದು, ಒಟ್ಟು 41813 ದೂರವಾಣಿಗಳಿವೆ. ಜಿಲ್ಲೆಯ 1245 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದ್ದು, ಬೆಸ್ಕಾಂ ಸಂಸ್ಥೆಯ ಎರಡು ವಿಭಾಗಗಳು ಚಿತ್ರದುರ್ಗ, ಹಿರಿಯೂರಿನಲ್ಲಿದ್ದು 220 ಮೆಗಾವ್ಯಾಟ್ ಸಾಮರ್ಥ್ಯ ವಿದ್ಯುತ್ (ಶರಾವತಿಯಿಂದ ಬರುವುದನ್ನು ಒಳತೆಗೆದುಕೊಳ್ಳುವ) ರಿಸೀವಿಂಗ್ ಸ್ಟೇಷನ್ ಹಿರಿಯೂರಿನಲ್ಲಿದೆ. ಪ್ರತಿ ತಾಲ್ಲೂಕಿನಲ್ಲಿ ಉಪ ಪ್ರಸರಣಾ ಕೇಂದ್ರಗಳಂತೆ ಒಟ್ಟು 37 ಕೇಂದ್ರಗಳಿವೆ. ಜಿಲ್ಲೆಯಲ್ಲಿ 200 ಗಾಳಿಯಂತ್ರಗಳಿಂದ 45 ಮೆ.ವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಜಿಲ್ಲೆಯಲ್ಲಿ 66 ವಾಣಿಜ್ಯ ಬ್ಯಾಂಕುಗಳ ಶಾಖೆಗಳಿದ್ದು, 63 ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗಳಿವೆ. 8 ಜಿಲ್ಲಾ ಕೇಂದ್ರಿಯ ಸಹಕಾರಿ ಬ್ಯಾಂಕ್ ಶಾಖೆಗಳು ಮತ್ತು 6 ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಶಾಖೆಗಳಿವೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಒಂದು ಶಾಖಾ ಕಚೇರಿ ಚಿತ್ರದುರ್ಗದಲ್ಲಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಕೈಗಾರಿಕಾಭಿವೃದ್ಧಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳ (ನೀರು, ರಸ್ತೆ, ವಿದ್ಯುತ್) ಒಟ್ಟು 3 ವಸಾಹತುಗಳನ್ನು ನಿರ್ಮಿಸಿದ್ದು, ಚಿತ್ರದುರ್ಗ, ಹಿರಿಯೂರು ಮತ್ತು ಹೊಸದುರ್ಗದಲ್ಲಿ ಸ್ಥಾಪಿತವಾಗಿದೆ. ಒಟ್ಟು 60 ಮಳಿಗೆಗಳನ್ನು ಮತ್ತು 153 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಬಹುಭಾಗ ಹಂಚಿಕೆಯಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಚಿತ್ರದುರ್ಗ ಕೋಟೆಯಲ್ಲಿ 86 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, 87 ವಿವಿಧ ವಿಸ್ತೀರ್ಣಗಳ ನಿವೇಶನಗಳನ್ನು ನಿರ್ಮಿಸಿ ಬೇಡಿಕೆಯಂತೆ ಮಂಡಳಿಯು ಹೊಳಲ್ಕೆರೆ ರಸ್ತೆಯಲ್ಲಿ 50 ಎಕರೆ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳಿಸಲು ಕಾರ್ಯೋನ್ಮುಖವಾಗಿದೆ.
ಹಾಲಿ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು:
1. ಕುಶಲಕರ್ಮಿಗಳು:
ಜಿಲ್ಲೆಯಲ್ಲಿ 24 ವಿವಿಧ ಕಸುಬುಗಳಲ್ಲಿ 16600 ಗ್ರಾಮೀಣ ಕುಶಲಕರ್ಮಿಗಳಿದ್ದಾರೆ. ಹೆಚ್ಚಿನ ಸಂಖ್ಯೆಯ ಕಂಬಳಿ ನೇಕಾರರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕಿನಲ್ಲಿದ್ದಾರೆ. ರೇಷ್ಮೆ ಸೀರೆ ನೇಕಾರರು ಮೊಳಕಾಲ್ಮೂರು, ಚಳ್ಳಕೆರೆಯಲ್ಲಿದ್ದಾರೆ. ಇನ್ನುಳಿದಂತೆ ಶಿಲ್ಪ ಕೆತ್ತನೆಗಾರರು ಹೊಳಲ್ಕೆರೆ ತಾಲ್ಲೂಕಿನ ನಾರಾಯಣಗೊಂಡನಹಳ್ಳಿಯಲ್ಲಿ, ಕಂಚಿನ ವಿಗ್ರಹ, ಹಿತ್ತಾಳೆ ಪ್ರಭಾವಳಿ ಕರಕುಶಲಕರ್ಮಿಗಳು ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮತ್ತು ಇನ್ನುಳಿದಂತೆ ಬಡಗಿ, ಕಮ್ಮಾರರು, ಚಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಹತ್ತಿ ನೇಯ್ಗೆ ನೇಕಾರರು, ತೆಂಗಿನ ನಾರಿನ ಕಸುಬುದಾರರು ಎಲ್ಲಾ ತಾಲ್ಲೂಕುಗಳಲ್ಲಿ ಇದ್ದಾರೆ.
2. ಇಲ್ಲಿಯವರೆಗೂ ಸ್ಥಾಪಿತವಾದ ಕೈಗಾರಿಕೆಗಳ ವರ್ಗೀಕರಣ:
ಆಹಾರ ಆಧಾರಿತ ಕೈಗಾರಿಕೆಗಳು, ಜವಳಿ ಆಧಾರಿತ ಕೈಗಾರಿಕೆಗಳು, ಮರ ಆಧಾರಿತ ಕೈಗಾರಿಕೆಗಳು, ಚರ್ಮ ಆಧಾರಿತ ಕೈಗಾರಿಕೆಗಳು, ಪ್ರಿಂಟಿಂಗ್ ಮತ್ತು ಸ್ಟೇಷನರಿ ಆಧಾರಿತ ಕೈಗಾರಿಕೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್ ಆಧಾರಿತ ಕೈಗಾರಿಕೆಗಳು, ಜನರಲ್ ಇಂಜಿನಿಯರಿಂಗ್ ಆಧಾರಿತ ಕೈಗಾರಿಕೆಗಳು, ಕೆಮಿಕಲ್ಸ್ ಆಧಾರಿತ ಕೈಗಾರಿಕೆಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಆಧಾರಿತ ಕೈಗಾರಿಕೆಗಳು, ಆಟೋಮೊಬೈಲ್ಸ್ ಆಧಾರಿತ ಕೈಗಾರಿಕೆಗಳು, ಫೆರಸ್ ಮತ್ತು ನಾನ್ ಫೆರಸ್ ಕೈಗಾರಿಕೆಗಳು, ಬೇಸಿಕ್ ಮೆಟಲ್ ಆಧಾರಿತ ಕೈಗಾರಿಕೆಗಳು, ಗ್ಲಾಸ್ ಮತ್ತು ಸೆರಾಮಿಕ್ಸ್ ಆಧಾರಿತ ಕೈಗಾರಿಕೆಗಳು, ಜಾಬ್ ವರ್ಕ್ ಆಧಾರಿತ ಕೈಗಾರಿಕೆಗಳು, ಮಿಸ್ ಲೇನಿಯಸ್ ಆಧಾರಿತ ಕೈಗಾರಿಕೆಗಳು, ಇತರೆ ಕೈಗಾರಿಕೆಗಳು.
ಜಿಲ್ಲೆಯ ಸ್ವಾಟ್ ಅನಾಲಿಸಿಸ್:
ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆ ಚಟುವಟಿಕೆ ಪ್ರಾರಂಭಿಸುವ ಮುನ್ನ ಜಿಲ್ಲೆಯ ಪ್ರಬಲ ಅಂಶಗಳು, ದುರ್ಬಲ ಅಂಶಗಳು, ಅವಕಾಶಗಳು ಹಾಗೂ ಅಪಾಯ ಅಂಶಗಳ ವಿಶ್ಲೇಷಣೆ ಅತ್ಯಾವಶ್ಯಕವಾಗಿರುತ್ತದೆ.
ಪ್ರಬಲತೆಗಳು (strength):
1. ರಾಷ್ಟ್ರೀಯ ಹೆದ್ದಾರಿ 4 ಮತ್ತು 13 ರಿಂದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ
2. ಮುಖ್ಯವಾದ ಪ್ರವಾಸಿ ತಾಣ
3. ವಿಫುಲವಾದ ಕೃಷಿ ತೋಟಗಾರಿಕೆ ಬೆಳೆ ಉತ್ಪನ್ನ
4. ಎಲ್ಲಾ ಋತುಮಾನಗಳಲ್ಲಿ ಗಾಳಿವೇಗ ಸಮನಾದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಗಾಳಿಯಂತ್ರ (windmill) ಸ್ಥಾಪನೆಗೆ ಅವಕಾಶ.
5. ಜಿಲ್ಲೆಯ ಬಹಳ ಸಂಖ್ಯೆಯ ವಿದ್ಯಾಸಂಸ್ಥೆಗಳಾದ ಇಂಜಿನಿಯರಿಂಗ್, ಪದವಿ ಕಾಲೇಜು, ಡೆಂಟಲ್ ಕಾಲೇಜು, ಪಾಲಿಟೆಕ್ನಿಕ್, ಕೈಗಾರಿಕಾ ತರಬೇತಿ ಕೇಂದ್ರ, ವೃತ್ತಿಪರ ಶಿಕ್ಷಣ ಸಂಸ್ಥೆ, ನೈಪುಣ್ಯ ಹೆಚ್ಚಿಸುವ ರುಡ್ ಸೆಟ್, ಸ್ಟೆಪ್,
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ : ಸಂಕ್ಷಿಪ್ತ ಪರಿಚಯ
ಮಾತೃಭಾಷೆಯಾದ ಕನ್ನಡ , ವೈದಿಕ ಭಾಷೆ ಸಂಸ್ಕೃತ,ಇಂಗ್ಲೀಷ್, ಜರ್ಮನ್ ಭಾಷೆಗಳ ಅಪಾರ ಪಾಂಡಿತ್ಯ ಹೊಂದಿರುವ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಠಿ ಮತ್ತು ಶ್ರಮದ ಫಲವಾಗಿ ಬೃಹನ್ಮಠ ಮತ್ತು ಸಂಸ್ಥೆ ಹಲವಾರು ಆಡಳಿತ್ಮಾಕ ಸುಧಾರಣೆಗಳನ್ನು ಹಲವು ವಿವಿಧ ಹಂತಗಳಲ್ಲಿ ಹಮ್ಮಿಕೊಂಡಿದೆ. ಗಣಕಯಂತ್ರ (computer) ದಲ್ಲಿ ಅದ್ಭುತ ಙ್ಞಾನವನ್ನು ಹೊಂದಿರುವ ಶ್ರೀಗಳು ಪಾಣಿನಿ ಅಷ್ಟಾಧ್ಯಾಯಿ ವ್ಯಾಕರಣವನ್ನು ತಂತ್ರಾಂಶದಲ್ಲಿ ನಿರ್ಮಿಸಿ, ಅಂತರ್ಜಾಲ ಸಹಾಯದಿಂದ ವಿಶ್ವವ್ಯಾಪಿ ಸಮಸ್ತರಿಗೂ ತಲುಪುವಂತೆ ಮಾಡಿರುವುದು ಒಂದು ಕ್ರಾಂತಿಯೇ ಸರಿ. ಹಲವಾರು ಅಂತರಾಷ್ಟ್ರೀಯ ವಿಚಾರಗೋಷ್ಟಿಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸಿದ್ದಾರೆ.
ಪರಮಪೂಜ್ಯ ಜಗದ್ಗುರುಗಳು ಪಟ್ಟಧರಿಸಿದ ಬೆಳ್ಳಿಹಬ್ಬದ ಸವಿನೆನಪಿಗಾಗಿಯೇ ಎಂಬಂತೆ ಅನುಭವ ಮಂಟಪದ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ನಿರ್ಮಾಣವಾಗುರಿವ 16 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಕಟ್ಟಡಗಳು ಪರಮಪೂಜ್ಯ ಜಗದ್ಗುರುಗಳವರ ಕ್ರೀಯಶೀಲತೆಗೆ ಸಾಕ್ಷಿ. ಸದ್ಧರ್ಮ ನ್ಯಾಯಫೀಠ, ಕೃಷಿ, ಕಾನೂನು, ಲೆಕ್ಕ ಪರಿಶೋಧನೆ ಮತ್ತು ಹಾಸ್ಟೆಲ್ ಎಂಬ ವಿವಿಧ ರೀತಿಯ ಸಮಿತಿಗಳ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಿ ಆಗುತ್ತಿದೆ. ಶ್ರೀಗಳು ರಂಗಕಲೆಗೆ ನೀಡುತ್ತಿರುವ ಪ್ರೋತ್ಸಹ ಅಪಾರ ಹಾಗು ಅನನ್ಯ.
ಸದ್ಧರ್ಮ ನ್ಯಾಯಪೀಠ :
ಆರು ವರ್ಷಗಳ ಹಿಂದೆ ಪ್ರಾರಂಭವಾದ ಸದ್ಧರ್ಮ ನ್ಯಾಯಪೀಠ ಇಂದು ಹಿರಿಯ ತರಳಬಾಳು ಜಗದ್ಗುರುಗಳ ಸಂಸ್ಮರಣಾರ್ಥಕವಾಗಿ ಕಟ್ಟಿದ ವಿದ್ಯಾರ್ಥನಿಲಯದ ಕಟ್ಟಡದ 3ನೇ ಮಹಡಿಯಲ್ಲಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಪ್ರತಿ ಸೋಮವಾರ ನಡೆಯುತ್ತದೆ. ಈ ಸಭೆ ಬೆಳಿಗ್ಗೆ 10.00 ಯಿಂದ ರಾತ್ರಿ 9.00 ಘಂಟೆಯವರೆಗೂ ನಡೆಯುತ್ತಿರುವುದು ಸರ್ವೆ ಸಾಮಾನ್ಯ ದೃಷ್ಯವಾಗಿದೆ. ಸರ್ವ ಸಮ್ಮತವಾದ ನ್ಯಾಯ ಭಕ್ತರಿಗೆ ಯಾವದೇ ಹಣ ಮತ್ತು ಕಾಲದ ವ್ಯಯವಿಲ್ಲದೆ ದೊರೆಯುತ್ತಿರುವುದು ಇಲ್ಲಿನ ವಿಶೇಷ. ಒಂದು ಅಂದಾಜಿನ ಪ್ರಕಾರ 400 -500 ಜನದರ್ಶನ ಮತ್ತು ಆಶಿರ್ವಾದ ಪಡೆಯುವರು.
ಹಿರಿಯ ತರಳಬಾಳು ಜಗದ್ಗುರುಗಳವರ ಕಾಲದಿಂದ ನಡೆದು ಬರುತ್ತಿರುವ ವಚನ ಸಾಹಿತ್ಯದ ಮುದ್ರಣ ಮತ್ತು ಪ್ರಚಾರ ಕಾರ್ಯ ಇಂದು ರಂಗಕಲೆಯ ಮೂಲಕ ತನ್ನ ಸಾದನೆಯಲ್ಲಿ ಹಿರಿಮೆಯನ್ನು ಸಾಧನೆಯಲ್ಲಿ ಹಿರಿಮೆಯನ್ನು ಸಾಧಿಸುತ್ತಿದೆ. ಇದು ಮಾತ್ರವಲ್ಲದೆ ಹಿರಿಯ ತರಳಬಾಳು ಜಗದ್ಗುರು ಲಿಂ ಶ್ರೀ ಶಿವಕುಮಾರ ಶಿವಾಚಾರ್ಯರು ಮಹಾಸ್ವಾಮಿಗಳವರ ಕಲಾಭಿಮಾನಕ್ಕೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.
ಸ್ವತಃ ನಾಟಕ ರಚಿಸಿ, ನಿರ್ದೇಶಿಸಿ ನಾಟಕಗಳನ್ನು ಪ್ರೋತ್ಸಹಿಸಿದ ಹಿರಿಯ ಶ್ರೀಗಳ ಪರಂಪರೆಯಲ್ಲಿ ಇಂದಿನ ಪರಮಪೂಜ್ಯ ಜಗದ್ಗುರುಗಳವರು ಮುಂದುವರೆದಿದ್ದಾರೆ ಎನ್ನುವುದು ಕಲಾರಂಗಕ್ಕೆ ಸಂದ ಗೌರವ. ಇಂದು ಸಿರಿಗೆರೆಯ ತರಳಬಾಳು ಕಲಾ ಸಂಘ ಬೇಸಿಗೆ ಕಾಲದ ರಜಾದಿನಗಳಲ್ಲಿ ರಂಗಾಸಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನಡೆಸುವ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿದೆ.
ಸಾಣೆಹಳ್ಳಿ ಶ್ರೀ ಮಠದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮಿಗಳವರು ಸಹ ರಂಗಕಲೆಯನ್ನು ಪೋಷಿಸುತ್ತ ಬಂದಿರುತ್ತಾರೆ. ಈ ದೆಸೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ರಂಗಮಂದಿರವನ್ನು ನಿರ್ಮಿಸಿರುವುದು ಹಾಗು ಬಯಲು ರಂಗಮಂದಿರವನ್ನು ಈಗಾಗಲೆ ಹೊಂದಿರುವುದು ಸಾಕ್ಷಿಯಾಗಿದೆ. ಸಾಣಿಹಳ್ಳಿಯು ಶ್ರೀ ಶಿವಕುಮಾರ ಸ್ವಾಮಿ ಕಲಾ ಸಂಘ (ರಿ) ಎಂಬ ಸಂಸ್ಥೆ ಆಶ್ರಯದಲ್ಲಿ ಕಲಾ ಸೇವೆ ನಡೆಯುತ್ತದೆ. 11ನೇ ಪಾದರ್ಪಣೆ ಮಾಡಿರುವ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ ಕೈಗೊಂಡಿರುವ ಶಿವ ಸಂಚಾರ ದ ಸಾಧನೆ ಒಂದು ರಚನಾತ್ಮಕ ಕಾರ್ಯವಾಗಿದೆ. ಜನರ ಮನ್ನಣೆ ಪಡೆಯುವಲ್ಲಿ ಈ ಕಲಾ ಸಂಘ ಯಶಸ್ವಿಯಾಗಿದೆ. ಪೂಜ್ಯ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳವರಿಗೆ ದೊರೆತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - 2004 ಶ್ರೀ ತರಳಬಾಳು ಕಲಾ ಸಂಘಕ್ಕೆ ಸಂದ ಗೌರವವಾಗಿದೆ.
ಬೃಹನ್ಮಠ ಮತ್ತು ವಿದಸ್ಯಾಸಂಸ್ಥೆಯ ಕಾರ್ಯಗಳು ಸುಗುಮವಾಗಿ ಹಾಗು ಹೆಚ್ಚು ಪರಿಣಾಮಕಾರಿಯಾಗಿ ನಡೆಯುವಂತೆ ಮಾಡಲು ಪರಮಾ ಪೂಜ್ಯರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೃಷಿಸಮಿತಿ, ಕಟ್ಟಡ ಸಮಿತಿ, ಲೆಕ್ಕ ಪರಿಶೋಧನ ಸಮಿತಿ, ಹಾಸ್ಟೆಲ್ ಸಮಿತಿ, ಕಾನೂನು ಸಮಿತಿ, ಗ್ರಂಥ ಪ್ರಕಟಣ ಸಮಿತಿ ಎಂಬ ಆರು ಪ್ರಮುಖ ಸಮಿತಿಗಳನ್ನು ವಿವರವಾಗಿ ಆದೇಶಿಸಿದ್ದಾರೆ.
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿನ 77 ಪ್ರೌಢಶಾಲೆ,15 ಪದವಿ ಪೂರ್ವ ಕಾಲೇಜುಗಳು, 5 ಪದವಿ ಕಾಲೇಜುಗಳು, ಒಂದು ಬಿ.ಇಡಿ. ಕಾಲೇಜು ಮತ್ತು ಇಂಜನೀಯರಿಂಗ್ ಕಾಲೇಜುಗಳು, 4 ಸಂಸ್ಕೃತ ಪಾಠಶಾಲೆಗಳು, 9 ನರ್ಸರಿ ಶಾಲೆಗಳು, 9 ಪ್ರಾಥಮಿಕ ಶಾಲೆಗಳು, ಒಂದು ಅಂಗನವಾಡಿ ತರಬೇತಿ ಸಂಸ್ಥೆ, 2 ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು, 8 ಅನಾಥ ಮಕ್ಕಳ ಕುಟಿರ ಹಾಗು 40 ವಿದ್ಯಾರ್ಥಿ ನಿಲಯಗಳು. 175 ವಿದ್ಯಾ ಸಂಸ್ಥೆಗಳ ಆಡಳಿತ ನಿರ್ವಹಣೆಗಾಗಿ 8 ಜಿಲ್ಲೆಗಳಲ್ಲಿ ಹಂಚಿಹೋಗಿರುವ ಶಾಲಾ ಕಾಲೇಜುಗಳನ್ನು 10 ಪ್ರಾಂತ್ಯಗಳಾಗಿ ವಿಂಗಢಿಸಲಾಗಿದೆ. ಪ್ರತಿ ವಲಯದ ಮುಖ್ಯಸ್ಥರು ತಮ್ಮ ವಲಯದ ಒಳಗೆ ಬರುವ ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಪತ್ರಗಳು, ಲೆಕ್ಕ ಪತ್ರ, ಇಂಡೆಂಟ್, ಬಡ್ತಿ, ವಾರ್ಷಿಕ ಬಡ್ತಿ, ಮುಂತಾದ ಪತ್ರಗಳನ್ನು ಪ್ರತಿ ಮಂಗಳವಾರ ಕೇಂದ್ರ ಕಛೇರಿ ಇರುವ ಸಿರಿಗೆರೆಯಲ್ಲಿ ಹಾಜರಾಗುವರು.








